
ವಿದ್ಯಾರ್ಥಿ ನಾಪತ್ತೆ ಪ್ರಕರಣ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ: ಅಂಗಡಿ, ಮುಂಗಟ್ಟು ಬಂದ್
ಫರಂಗಿಪೇಟೆ: ಬಂಟ್ವಾಳ ಫರಂಗಿಪೇಟೆ ಸಮೀಪದ ಕಿದೆಬೆಟ್ಟು ಪದ್ಮನಾಭ ಮಡಿವಾಳ ಅವರ ಮಗ, ಪಿಯುಸಿ ವಿದ್ಯಾರ್ಥಿ ದಿಗಂತ್ ಅವರು ನಿಗೂಡ ನಾಪತ್ತೆಯಾಗಿ ಇಂದಿಗೆ (ಮಾ.1) 5 ದಿನಗಳು ಕಳೆದರೂ ಪೊಲೀಸ್ ಇಲಾಖೆ ಹಾಗೂ ಸರಕಾರದ ಯಾವುದೇ ರೀತಿಯ ಕಾರ್ಯಚರಣೆ ಯಶಸ್ವಿ ಕಾಣದೆ ಇರುವುದರಿಂದ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಫರಂಗಿಪೇಟೆ ಜಂಕ್ಷನ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಬಾಲಕ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ ನಡೆದಿದ್ದು, ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ನಾಪತ್ತೆಯಾದ ಬಾಲಕನನ್ನು ತಕ್ಷಣವೇ ಪೋಲೀಸರು ಪತ್ತೆ ಹಚ್ಚಬೇಕು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಹಿಂದೂ ಮುಖಂಡರು, ಬಿಜೆಪಿ ನಾಯಕರಿಗೆ ಭದ್ರತೆಯಿಲ್ಲದಂತಾಗಿದೆ ಎಂದ ಅವರು, ಫರಂಗಿಪೇಟೆ ಪರಿಸರದಲ್ಲಿ ಗಾಂಜಾ ಮಾಫಿಯಾ ಹೆಚ್ಚಾಗಿದೆ. ಈ ಹಿಂದೆಯೂ ಇಲ್ಲಿ ಬಿಜೆಪಿ ಮುಖಂಡನಿಗೆ ಮಾರಣಾಂತಿಕ ಹಲ್ಲೆಯಾಗಿತ್ತು ಎಂದು ಹೇಳಿದರು.
ಇದೀಗ ಮತ್ತೆ ಬಾಲಕ ನಾಪತ್ತೆಯಾಗಿ ಐದು ದಿನಗಳು ಕಳೆದಿವೆ. ಎರಡು ದಿನಗಳಲ್ಲಿ ಬಾಲಕನ ನಾಪತ್ತೆ ಪ್ರಕರಣ ಭೇಧಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರತಿಭಟನೆಯ ಕಿಡಿ ಹರಡಲಿದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಮಾತನಾಡಿ, ವಿದ್ಯಾರ್ಥಿಯ ನಾಪತ್ತೆ ಪ್ರಕರಣವನ್ನು ಪೊಲೀಸರು ಆದಷ್ಟು ಬೇಗ ಪತ್ತೆಹಚ್ಚಬೇಕು. ಘಟನೆಯಾದ ತಕ್ಷಣವೇ ಬಾಲಕನ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪೋಲೀಸರು ಆ ಸಮಯದಲ್ಲಿ ಕೊಂಚ ನಿರ್ಲಕ್ಷ್ಯ ಮಾಡಿದ್ದಾರೆ ಎಂದರು.
ಇದರಿಂದಾಗಿ ಘಟನೆ ನಡೆದು 5 ದಿನವಾದರೂ ಬಾಲಕ ಪತ್ತೆಯಾಗಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಗಾಂಜಾ ಮಾಫಿಯಾ ಮಿತಿ ಮೀರಿದ್ದು ಅಲ್ಲದೇ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಗಾಂಜಾ ಮಾಫಿಯಾ ಮಿತಿ ಮೀರಿದೆ ಎಂದ ಅವರು, ಈ ವ್ಯವಸ್ಥೆಯನ್ನು ಮಟ್ಟ ಹಾಕುವಲ್ಲಿ ವಿಫಲವಾಗಿದೆ ಎಂದು ಹೇಳಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಡಾ.ಭರತ್ ಶೆಟ್ಟಿ, ಹರೀಶ್ ಪೂಂಜ, ಪ್ರಸಾದ್ ಕುಮಾರ್ ರೈ, ರವೀಂದ್ರ ಕಂಬಳಿ, ಭರತ್ ಕುಮ್ಡೆಲು, ಉಮೇಶ್ ಶೆಟ್ಟಿ ಬರ್ಕೆ, ತಾರಾನಾಥ ಕೊಟ್ಟಾರಿ, ಫಾರೂಕ್ ಪರಂಗಿಪೇಟೆ, ರಮ್ಲಾನ್, ನಂದನ್ ಮಲ್ಯ, ಮನೋಜ್ ಆಚಾರ್ಯ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಬೆಳಗ್ಗೆ 11 ಗಂಟೆಯವರೆಗೆ ಪ್ರತಿಭಟನೆ ನಡೆದಿದ್ದ, ಬಳಿಕ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಭೇಟಿ...
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ್ ಎನ್., ಮಾತನಾಡಿ, ಈ ಪ್ರಕರಣ ಪ್ರತಿಭಟನೆ ಮಾಡುವ ಹಂತದವರೆಗೆ ಬರಬಾರದಿತ್ತು. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ಕ್ಲಿಷ್ಟಕರವಾದ ಪ್ರಕರಣಗಳು ಸ್ವಲ್ಪ ಸಮಯ ತಗಲುತ್ತದೆ. ಜಿಲ್ಲೆಯ ವಿವಿಧ ಠಾಣೆಯ ನುರಿತ ಪೋಲೀಸರನ್ನು ಕರೆಸಿ ತನಿಖೆ ದುಪ್ಪಟ್ಟು ಗೊಳಿಸುತ್ತೇವೆ. ದಿಗಂತ್ ಪತ್ತೆಯಾಗುವವರೆಗೆ ನಾವು ಸುಮ್ಮನೆ ಕೂರುವುದಿಲ್ಲ. ಸಾರ್ವಜನಿಕರಲ್ಲಿ ಈ ಬಗ್ಗೆ ಮಾಹಿತಿಗಳು ಇದ್ದರೆ ನಮ್ಮ ಜೊತೆ ಹಂಚಿಕೊಳ್ಳಿ, ನಮ್ಮ ಮೇಲೆ ಭರವಸೆ ಇಡಿ, ತನಿಖೆ ಮುಂದುವರಿಸಲು ನಿಮ್ಮ ಸಹಕಾರ ಇರಲಿ ಎಂದರು.