
ರಾಜ್ಯದಲ್ಲಿ ತುಘಲಕ್ ಆಡಳಿತ ನಡೆಯುತ್ತಿದೆಯೋ ಎಂಬ ಅವಮಾನ ಸೃಷ್ಟಿಯಾಗಿದೆ: ಯು. ನಂದನ್ ಮಲ್ಯ
ಮಂಗಳೂರು: ರಾಜ್ಯದಲ್ಲಿ ತುಘಲಕ್ ಆಡಳಿತ ನಡೆಯುತ್ತಿದೆಯೋ ಅಥವಾ ಸಿದ್ದರಾಮಯ್ಯ ಅವರ ಆಡಳಿತ ನಡೆಯುತ್ತಿದೆಯೋ ಎಂಬ ಅನುಮಾನ ಸೃಷ್ಟಿಯಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಯು. ನಂದನ್ ಮಲ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯಭಾರ ನಡೆಸುವ ಸರ್ಕಾರ ರಾಜ್ಯದ ಅಭಿವೃದ್ಧಿ, ಜನರ ಹಿತಾಸಕ್ತಿಯನ್ನ ಕಾಪಾಡಲು ಸಾಧ್ಯವಾಗದೇ, ಬಿಜೆಪಿ ನಾಯಕರ ಮೇಲೆ ಪದೇ ಪದೇ ದ್ವೇಷದ ರಾಜಕಾರಣವನ್ನ ಮಾಡಿಕೊಂಡು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ನಾಯಕರನ್ನು ಗೆಲ್ಲಲು ಸಾಧ್ಯವಾಗದ ಹೇಡಿಗಳು ಬಿಜೆಪಿ ಶಾಸಕರ ಮೇಲೆ ಹಗೆಯನ್ನ ಮುಂದುವರೆಸಿದ್ದಾರೆ.
ಜಿಲ್ಲೆಯ ಪದವು ಶಕ್ತಿನಗರದ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಮಾ.2 ರಂದು ಬ್ರಹ್ಮಕಲಶೋತ್ಸವ ಕಾರ್ಯಕ್ರಮವಿದ್ದು, ಅದಕ್ಕೆ ಶಾಸಕ ವೇದವ್ಯಾಸ್ ಕಾಮತ್ ಅವರು ಆಗಮಿಸಿರುತ್ತಾರೆ. ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಮುಖಂಡ, ವೇದವ್ಯಾಸ್ ಕಾಮತ್ ಹಾಗೂ ಜೊತೆಗಾರರು ತಮ್ಮ ಮೇಲೆ ಅವಾಚ್ಯ ಶಬ್ಧ ಬಳಸಿದ್ದಾರೆ. ಹಾಗೂ ಹಲ್ಲೆ ನಡೆಸಿದ್ದಾರೆ ಎಂದು ದೂರನ್ನು ದಾಖಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಂಕನಾಡಿ ಪೊಲೀಸರು ಪೂರ್ವಾಪರ ತಿಳಿಯದೇ, ಯಾವುದೇ ತನಿಖೆಯನ್ನೂ ನಡೆಸದೇ ಬಿಜೆಪಿ ಶಾಸಕರ ಮೇಲೆ ಎಫ್‌ಐಆರ್ ದಾಖಲು ಮಾಡಿದೆ.
ಕಾಂಗ್ರೆಸ್ ತನ್ನ ಅಧಿಕಾರವನ್ನ ದುರುಪಯೋಗ ಮಾಡಿಕೊಂಡು ಬಿಜೆಪಿ ಶಾಸಕರ ಮೇಲೆ ಕೇಸ್‌ಗಳನ್ನು ಹಾಕಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಇಂಥಾ ಕೆಟ್ಟ ರಾಜಕೀಯ ಮಾಡಿ ಕೇಸ್ ಫೈಲ್ ಮಾಡಿಸೋದು ಇದೇ ಮೊದಲಲ್ಲ. ಹಿಂದೆ ಹರೀಶ್ ಪುಂಜಾ, ಭರತ್ ಶೆಟ್ಟಿ ಅವರ ವಿರುದ್ಧವೂ ಹೀಗೆ ದೂರನ್ನ ದಾಖಲಿಸಿದ್ದರು.
ಅದೇ ಕಾಂಗ್ರೆಸ್ ನಾಯಕ ಐವಾನ್ ಡಿಸೋಜಾ ರಾಜ್ಯಪಾಲರಿಗೆ ಬಾಂಗ್ಲಾ ಪ್ರಧಾನಿಯ ಸ್ಥಿತಿ ಬರುತ್ತದೆ ಎಂದರೂ ಕೂಡ ಅವರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಕೇಸ್ ದಾಖಲಿಸಿ ಎಂದಾಗ ಇದೇ ಪೊಲೀಸರು ಲೀಗಲ್ ಒಪಿನಿಯನ್ ಬಂದ್ರೆ ಮಾಡುತ್ತೇವೆ ಎಂದಿದ್ದರು. ಆದರೆ ಈಗ ವೇದವ್ಯಾಸ್ ಕಾಮತ್ ಅವರ ವಿರುದ್ಧ ದೂರು ದಾಖಲಿಸಲು ಯಾವ ಲೀಗಲ್ ಒಪಿನಿಯನ್ ಬಂದಿದೆ?
ಹಾಗಾದರೆ ರಾಜ್ಯದಲ್ಲಿ ಎರಡು ಕಾನೂನು ಇದೆಯಾ? ಭಾರತೀಯ ಜನತಾ ಪಕ್ಷಕ್ಕೊಂದು ಹಾಗೂ ಕಾಂಗ್ರೆಸ್ ಪಕ್ಷಕ್ಕೊಂದು ಕಾನೂನ್ನ ಸಿದ್ದರಾಮಯ್ಯ ಅವರ ಸರ್ಕಾರ ಹೊಸದಾಗಿ ರಚಿಸಿದೆಯಾ?. ದೇಶ ಅಭಿವೃದ್ಧಿಯತ್ತ ವೇಗವಾಗಿ ಸಾಗುತ್ತಿದೆ. ಆದರೆ ನಮ್ಮ ರಾಜ್ಯ ಮಾತ್ರಾ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಇನ್ನೂ ಹಿಂದಕ್ಕೆ ತಲುಪುತ್ತಿದೆ. ಅಭಿವೃದ್ಧಿಯನ್ನು ಮಾಡಲಾಗದ ಸರ್ಕಾರ ಪ್ರಶ್ನೆ ಮಾಡುವ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸಿ, ನಾಯಕರ ಮೇಲೆ ಸುಳ್ಳು ಕೇಸ್ ದಾಖಲಿಸಿ ಬಾಯಿ ಮುಚ್ಚಿಸೋ ಕೆಲಸ ಮಾಡುತ್ತಿದ್ದಾರೆ. ಆದರೆ ಅವರಿಗೆ ಗೊತ್ತಿಲ್ಲ. ಬಿಜೆಪಿ ಇಂತಹ ಬೆದರಿಕೆಗೆಲ್ಲಾ ಹೆದರೋದಿಲ್ಲ. ನಮ್ಮದು ಹೋರಾಟದಿಂದ ಬಂದಂತ ಪಕ್ಷ. ಮೊದಲು ಈ ದ್ವೇಷದ ರಾಜಕೀಯ ಬಿಟ್ಟು ಕೆಲಸ ಮಾಡಿ. ಬಿಜೆಪಿ ಹಾಕಿಕೊಟ್ಟ ಅಭಿವೃದ್ಧಿಯ ದಾರಿಯಲ್ಲಿ ನಡೆಯಿರಿ ಎಂದು ಯು. ನಂದನ್ ಮಲ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.