
ಮಂಗಳೂರು ವಿ.ವಿ.: ರಾಜ್ಯಶಾಸ್ತ್ರ ಪದವೀಧರರಲ್ಲದವರಿಂದ ಸಂವಿಧಾನ ಪಠ್ಯ ಬೋಧನೆ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಭಾರತೀಯ ಸಂವಿಧಾನ ಪಠ್ಯವನ್ನು ರಾಜ್ಯಶಾಸ್ತ್ರ ಪದವೀಧರು ಅಲ್ಲದವರು ಬೋಧನೆ ಮಾಡುತ್ತಿರುವ ಬಗ್ಗೆ ಮಂಗಳವಾರ ನಡೆದ ವಿವಿ 2024-25ನೇ ಸಾಲಿನ ಚತುರ್ಥ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಭೆ, ಮುಂದಿನ ಸಾಲಿನಿಂದ ವಿವಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲ ಪದವಿ ಕಾಲೇಜುಗಳಿಗೆ ಸೂಚನೆ ನೀಡಲು ನಿರ್ಧರಿಸಿತು.
ಕೊಣಾಜೆಯ ಮಂಗಳಗಂಗೋತ್ರಿಯ ವಿವಿ ಕುಲಸಚಿವರ ಸಭಾಂಗಣದಲ್ಲಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅಧ್ಯಕ್ಷತೆಯಲ್ಲಿ ಆನ್‌ಲೈನ್ ಮೂಲಕ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು.
ವಿವಿ ವ್ಯಾಪ್ತಿಯ ರಾಜ್ಯಶಾಸ್ತ್ರ ಉಪನ್ಯಾಸಕರು ಇಲ್ಲದ ಕಾಲೇಜುಗಳಲ್ಲಿ ಮಾನದಂಡ ಮೀರಿ ಇತರೆ ಉಪನ್ಯಾಸಕರು ಸಂವಿಧಾನ ಪಠ್ಯವನ್ನು ಬೋಧಿಸುತ್ತಿರುವ ಬಗ್ಗೆ ಪ್ರೊ. ಜಯರಾಜ್ ಅಮೀನ್ ಸಭೆಯಲ್ಲಿ ಪ್ರಸ್ತಾಪಿಸಿದರು.
ಇದಕ್ಕೆ ಉತ್ತರಿಸಿದ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಮಂಗಳೂರು ವಿವಿ ವ್ಯಾಪ್ತಿಯಲ್ಲಿ 150 ಪದವಿ ಕಾಲೇಜುಗಳು ಇವೆ. ಎಂಟು ಮಂದಿ ರಾಜ್ಯಶಾಸ್ತ್ರ ಉಪನ್ಯಾಸಕರ ಪೈಕಿ ಇಬ್ಬರು ಡೀಮ್ಡ್ ವಿವಿಗೆ ತೆರಳಿದ್ದಾರೆ. ಉಳಿದದ್ದು ಆರು ಮಂದಿ ಮಾತ್ರ. ಹೀಗಿರುವಾಗ ಇತರೆ ಉಪನ್ಯಾಸಕರು ಸಂವಿಧಾನ ಬಗ್ಗೆ ತರಗತಿಯಲ್ಲಿ ಪಾಠ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ವಿಚಾರವನ್ನು ವಿವಿಯ ಬೋರ್ಡ್ ಆಫ್ ಸ್ಟಡೀಸ್(ಬಿಒಎಸ್) ಮುಂದೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಅಂತಿಮ ಪದವಿ ಪರೀಕ್ಷೆಗಳು ಮುಕ್ತಾಯಗೊಂಡ ಬಳಿಕ ಫಲಿತಾಂಶ ಘೋಷಣೆಯಾಗುತ್ತದೆ. ಆದರೆ ರ‍್ಯಾಂಕ್‌ನ್ನು ಪುನರ್ ಮೌಲ್ಯಮಾಪನ ನಡೆಸಿ ಫಲಿತಾಂಶ ಘೋಷಣೆ ವೇಳೆಯೇ ಪ್ರಕಟಿಸಲಾಗುವುದು ಎಂದು ಕುಲಪತಿ ಸ್ಪಷ್ಟಪಡಿಸಿದರು.
ಈ ಬಾರಿ ರ‍್ಯಾಂಕ್ ನೀಡಿಕೆಗೆ ಎನ್‌ಇಪಿ ಪ್ರಕಾರ ಮಾನದಂಡ ನಿಗದಿಪಡಿಸಲಾಗಿದೆ. ಈ ಹಿಂದೆ ಅತ್ಯಂತ ಅಧಿಕ ಅಂಕ ಪಡೆದ ಆಧಾರದಲ್ಲಿ ರ್ಯಾಂಕ್ ನೀಡಲಾಗುತ್ತಿತ್ತು. ಈ ಬಾರಿ ‘ಎ’ ಪ್ಲಸ್ ಗ್ರೇಡ್ ಮಾನದಂಡದಲ್ಲಿ ರ್ಯಾಂಕ್ ಪ್ರಕಟಿಸಲಾಗುತ್ತದೆ. ಈ ಕುರಿತಂತೆ ನಿಯಮ ಬದಲಾವಣೆಗೊಂಡಿದೆ ಎಂದರು.
ಮೈಸೂರಿನ ಸಹಜ್ ಮಾರ್ಗ್ ಸ್ಪಿರಿಚುವಾಲಿಟಿ ಫೌಂಡೇಷನ್ ವತಿಯಿಂದ ಧ್ಯಾನ ಮತ್ತು ಎಲ್ಲರೊಡನೆ ಪ್ರೀತಿಯನ್ನು ಉತ್ತೇಜಿಸುವ ಉದ್ದೇಶದಿಂದ ಮಂಗಳೂರು ವಿವಿಯಲ್ಲಿ ಹಾರ್ಟ್ಫುಲ್ನೆಸ್ ಪೀಠ ಸ್ಥಾಪಿಸುವಂತೆ ಕೋರಿಕೊಂಡಿದೆ. ಅಲ್ಲದೆ ಈ ಪೀಠ ಸ್ಥಾಪನೆಗೆ 25 ಲಕ್ಷ ರೂ. ಠೇವಣಿ ಇರಿಸುವುದಾಗಿಯೂ ತಿಳಿಸಿದೆ. ಈಗಾಗಲೇ ರಾಜ್ಯದ ಇತರೆ ಆರು ವಿವಿಗಳಲ್ಲಿ ಇಂತಹ ಪೀಠ ಸ್ಥಾಪಿಸಿದ ಬಗ್ಗೆ ಮಾಹಿತಿ ನೀಡಿದೆ. ವಿವಿಗೆ ಯಾವುದೇ ಆರ್ಥಿಕ ಹೊರೆ ಇಲ್ಲದ ಕಾರಣ ಇದಕ್ಕೆ ಸಮ್ಮತಿಸಬಹುದು ಎಂದು ಕುಲಪತಿ ಹೇಳಿದರು.
ಮಂಗಳೂರು ವಿವಿಯಲ್ಲಿ ಕುಂದಾಪುರ ಕನ್ನಡ ಅಧ್ಯಯನ ಪೀಠ ಸ್ಥಾಪನೆಗೆ ಬೇಡಿಕೆ ಬಂದಿದೆ. ಅದಕ್ಕಾಗಿ ವಿವಿಯ ಹಿಂದಿನ ಅಭಿವೃದ್ಧಿ ಅನುದಾನ 850 ಲಕ್ಷ ರೂ.ಗಳಲ್ಲಿ 50 ಲಕ್ಷ ರೂ. ನಿಗದಿಪಡಿಸುವಂತೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ವಿದೇಶಿ ವಿದ್ಯಾರ್ಥಿಗಳಿಗೆ ಮಂಗಳೂರು ವಿವಿಯಲ್ಲಿ ಡಾಕ್ಟರೇಟ್ ನಂತರದ ಕಲಿಕೆಗೆ ಅನುಮತಿ ಕೋರಲಾಗಿದೆ. ಆದರೆ ವಿವಿಗೆ ಆರ್ಥಿಕ ಹೊರೆಯಾಗದಂತೆ ವಿದ್ಯಾರ್ಥಿಗಳ ಸ್ವಂತ ಖರ್ಚಿನಲ್ಲಿ ಕಲಿಕೆಗೆ ಅನುಮತಿ ನೀಡಲು ಸಭೆ ನಿರ್ಧರಿಸಿತು. ಬೇರೆ ಬೇರೆ ವಿದೇಶಿ ವಿದ್ಯಾರ್ಥಿಗಳಿಗೂ ಇದೇ ರೀತಿ ಅವರದೇ ಖರ್ಚಿನಲ್ಲಿ ಅಧ್ಯಯನ ನಡೆಸಲು ಅವಕಾಶ ನೀಡುವ ನಿಟ್ಟಿನಲ್ಲಿ ತಾಂತ್ರಿಕ ಸಮಿತಿ ಅಂತಿಮ ತೀರ್ಮಾನ ಕೈಗೊಳ್ಳುವಂತೆಯೂ ಸೂಚಿಸಲಾಯಿತು.
ಆಡಳಿತ ವಿಭಾಗದ ಕುಲಸಚಿವ ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ, ಹಣಕಾಸು ವಿಭಾಗ ಕುಲಸಚಿವ ಪ್ರೊ.ಸಂಗಪ್ಪ ಉಪಸ್ಥಿತರಿದ್ದರು.