ನದಿಯ ಜೊತೆಗೆ ಜನರ ಬದುಕನ್ನು ನಾಶ ಮಾಡಲು ಹೊರಟ ಮರಳುಕಳ್ಳರ ಹೆಡೆಮುರಿ ಕಟ್ಟಲು ಜಿಲ್ಲಾಡಳಿತ ಸಂಪೂರ್ಣ ವಿಫಲ: ಮುನೀರ್ ಕಾಟಿಪಳ್ಳ

ನದಿಯ ಜೊತೆಗೆ ಜನರ ಬದುಕನ್ನು ನಾಶ ಮಾಡಲು ಹೊರಟ ಮರಳುಕಳ್ಳರ ಹೆಡೆಮುರಿ ಕಟ್ಟಲು ಜಿಲ್ಲಾಡಳಿತ ಸಂಪೂರ್ಣ ವಿಫಲ: ಮುನೀರ್ ಕಾಟಿಪಳ್ಳ


ಮಂಗಳೂರು: ಇಲ್ಲಿನ ಬಲಾಢ್ಯ ಮರಳುಕಳ್ಳರು ನದಿಯ ಜೊತೆಗೆ ಜನತೆಯ ಬದುಕನ್ನು ಕೂಡ ನಾಶ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಸಂಪೂರ್ಣ ಮಾಹಿತಿಯಿದ್ದರೂ ಮರಳುಕಳ್ಳರ ಹೆಡೆಮುರಿ ಕಟ್ಟಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು.

ಅವರು ನಗರದಲ್ಲಿ ಇಂದು ಮಲ್ಲಿಕಟ್ಟೆಯಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಚೇರಿಯೆದುರು ನಡೆದ ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. 


ಕೊಟ್ಟಾರಿಕುದ್ರು ಗಟ್ಟಿಕುದ್ರು ದ್ವೀಪಗಳಲ್ಲಿ ಯಾವುದೇ ತರದ ಮರಳುಗಾರಿಕೆಗೆ ಅನುಮತಿ ಇಲ್ಲದಿದ್ದರೂ ಬಲಾಢ್ಯ ಮರಳು ಮಾಫಿಯಾ ಅಕ್ರಮವಾಗಿ ಮರಳುಗಾರಿಕೆ ವ್ಯಾಪಕವಾಗಿ ನಡೆಸುತ್ತಿರುವುದರಿಂದ ಉಭಯ ದ್ವೀಪಗಳು ಕೊಚ್ಚಿಹೋಗುವ ಭೀತಿಗೆ ಗುರಿಯಾಗಿದೆ. ಸುಮಾರು 40ರಷ್ಟು ಕುಟುಂಬಗಳು ಹಲವು ತಲೆಮಾರುಗಳಿಂದ ವಾಸ ಇರುವ, ಕಾಂಡ್ಲಾ ಜಾತಿಯ ಸಸ್ಯವರ್ಗಗಳಿರುವ ಪರಿಸರದ ದೃಷ್ಟಿಯಿಂದ ಅತಿ ಸೂಕ್ಷ್ಮವಾಗಿರುವ ಇಂತಹ ದ್ವೀಪಗಳನ್ನು ರಕ್ಷಿಸಲು ತಕ್ಷಣದಿಂದಲೇ ಕ್ರಮ ವಹಿಸಬೇಕಾಗಿದೆ ಎಂದರು.


ಪ್ರತಿಭಟನೆಯನ್ನು ಬೆಂಬಲಿಸಿ ಮಾತನಾಡಿದ ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ, ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ ಅವರು, ಕೊಟ್ಟಾರಿಕುದ್ರು ಗಟ್ಟಿಕುದ್ರು ದ್ವೀಪಗಳು ಪರಿಸರದ ದೃಷ್ಟಿಯಿಂದ ಅತಿ ಸೂಕ್ಷ್ಮ ಪ್ರದೇಶವಾಗಿದೆ. ಆದರೂ ಇಲ್ಲಿ ಕಳೆದ ಹಲವು ವರ್ಷಗಳಿಂದ ಪೊಲೀಸ್ ಹಾಗೂ ವಿವಿಧ ಇಲಾಖೆಗಳು, ರಾಜಕೀಯ ಹಿತಾಸಕ್ತಿಗಳ ಬೆಂಬಲದೊಂದಿಗೆ ವ್ಯಾಪಕ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆಯುತ್ತಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹೋರಾಟ ಸಮಿತಿಯ ಗೌರವ ಸಲಹೆಗಾರ ಸುನಿಲ್ ಕುಮಾರ್ ಬಜಾಲ್ ಅವರು, ದ್ವೀಪವಾಸಿಗಳ ಸಂಕಷ್ಟಗಳನ್ನು ವಿವರಿಸಿದ ಅವರು, ಈ ಹಿಂದಿನ ಜಿಲ್ಲಾಧಿಕಾರಿಗಳು ಸ್ಕೌಟ್ಸ್ ಎಂಬ ನಾಮ ಫಲಕವನ್ನು ಕೂಡ ಕೊಟ್ಟಾರಿಕುದ್ರುನಲ್ಲಿ ಸ್ಥಾಪಿಸಿರುತ್ತಾರೆ. ಆದರೆ ಇಲ್ಲಿನ ಮರಳುಕಳ್ಳರು ಆ ನಾಮಫಲಕವನ್ನೇ ಕಿತ್ತೊಗೆದು ಅಕ್ರಮ ಮರಳುಗಾರಿಕೆಯನ್ನು ನಡೆಸುವುದಲ್ಲದೆ, ವಿರೋಧ ವ್ಯಕ್ತಪಡಿಸುವ ಸ್ಥಳೀಯರಿಗೆ ಜೀವ ಬೆದರಿಕೆ ಒಡ್ಡುವ ಮೂಲಕ ಕುದ್ರುವಿನಿಂದಲೇ ಒದ್ದೋಡಿಸುವ ಷಡ್ಯಂತ್ರವನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು.

ಹೋರಾಟವನ್ನು ಬೆಂಬಲಿಸಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಮಾಜಿ ಕಾರ್ಪೊರೇಟರ್ ಮರಿಯಮ್ಮ ಥಾಮಸ್, ಹೋರಾಟ ಸಮಿತಿಯ ಅಧ್ಯಕ್ಷ ಓಸ್ವಾಲ್ಡ್ ಫುರ್ತಾಡೋ ಮಾತನಾಡಿದರು.

ಪ್ರತಿಭಟನೆಯಲ್ಲಿ ಕ್ಯಾಥೊಲಿಕ್ ಸಭಾದ ಉಪಾಧ್ಯಕ್ಷ ಸ್ಟೀವನ್ ರೋಡ್ರಿಗಸ್, ಜಿಲ್ಲಾ ಕಾರ್ಮಿಕ ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ರಫೀಕ್ ಹರೇಕಳ, ಯುವಜನ ನಾಯಕರಾದ ರಿಜ್ವಾನ್ ಹರೇಕಳ, ಮಹಿಳಾ ಮುಖಂಡರಾದ ಅಸುಂತ ಡಿಸೋಜ, ಪ್ರಮೋದಿನಿ, ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ನಾಯಕರಾದ ಫ್ಲೇವಿ ಕ್ರಾಸ್ತಾ ಅತ್ತಾವರ, ಸ್ಟ್ಯಾನ್ಲಿ ಡಿಕುನ್ನಾ, ಸಾಮಾಜಿಕ ಚಿಂತಕರಾದ ನೆಲ್ಸನ್ ರೋಚ್ ಮುಂತಾದವರು ಭಾಗವಹಿಸಿದ್ದರು.

ಹೋರಾಟದ ನೇತೃತ್ವವನ್ನು ಹೋರಾಟ ಸಮಿತಿ ನಾಯಕರಾದ ಸುನೀತಾ ಡಿಸೋಜ, ಇತಾಲಿಸ್, ಡೇವಿಡ್ ಡಿಸೋಜ, ಮೇಜಿ ಡಿಸೋಜ, ಆಸ್ಕರ್ ಡಿಸೋಜ, ಕಿಶೋರ್ ಡಿಸೋಜ, ಬ್ರೂಸ್ಲಿ ಗ್ಲಾಡ್ಸನ್ ಮತ್ತಿತರರು ವಹಿಸಿದ್ದರು.

ಬಳಿಕ ಹೋರಾಟ ಸಮಿತಿಯ ಉನ್ನತ ಮಟ್ಟದ ನಿಯೋಗವೊಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಿತು. ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯ ಪರಿಹಾರಕ್ಕಾಗಿ ಕೂಡಲೇ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಕೊಟ್ಟಾರಿಕುದ್ರು ಗಟ್ಟಿಕುದ್ರು ದ್ವೀಪಗಳ ಉಳಿಸಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಜರುಗಿದ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗುತ್ತಾ ಆಗ್ನೆಸ್ ಜಂಕ್ಷನ್‌ನಿಂದ ಮೆರವಣಿಗೆಯಲ್ಲಿ ಸಾಗಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article