ಬಿಟ್ಟು ಹೋದ ತಂದೆ ಮೇಲಿನ ಹಠಕ್ಕಾಗಿ 'ಕಿಕ್ ಬಾಕ್ಸರ್' ಆದ ಮೈಸೂರಿನ ಬೀಬಿ ಫಾತಿಮಾಗೆ ಗೌರವ

ಬಿಟ್ಟು ಹೋದ ತಂದೆ ಮೇಲಿನ ಹಠಕ್ಕಾಗಿ 'ಕಿಕ್ ಬಾಕ್ಸರ್' ಆದ ಮೈಸೂರಿನ ಬೀಬಿ ಫಾತಿಮಾಗೆ ಗೌರವ

'ಮಂಗಳಮುಖಿ' ಬಿಕ್ಷುಕ ಅಕ್ರಮ್ ಪಾಷಾ ಆಸರೆಯಲ್ಲಿ ಬೆಳೆದ ಅದ್ಭುತ ಸಾಧಕಿಯನ್ನು ಗೌರವಿಸಿದ ಮಂಗಳೂರ ಸಮಾಜಸೇವಕರು


ಮಂಗಳೂರು: ಹುಟ್ಟಿದ್ದೆಲ್ಲಾ ಹೆಣ್ಣಾಯಿತೆಂದು ಪತ್ನಿ ಮತ್ತು ನಾಲ್ಕು ಹೆಣ್ಣು ಮಕ್ಕಳನ್ನು ಬಿಟ್ಟುಹೋದ ಗಂಡನಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬಕ್ಕೆ ಆಸರೆಯಾದ ಮಂಗಳಮುಖಿ 'ಅಕ್ರಮ್ ಪಾಷಾ' ಮತ್ತು ಆ ಕುಟುಂಬದಲ್ಲಿ ಬೆಳೆದ ಹಿರಿಯ ಹೆಣ್ಮಗಳು ಬೀಬಿ ಫಾತಿಮಾಳ ಸಾಧನೆಯ ಕಲ್ಲು ಮುಳ್ಳಿನ ಹಾದಿ ರೋಚಕವಾಗಿದ್ದು ಅದನ್ನು ಗುರುತಿಸಿ ಮಂಗಳೂರು ಸಮಾಜಸೇವಕರು ಸನ್ಮಾನಿಸಿದರು.


ಮೈಸೂರಿನ ಉದಯಗಿರಿ ಮಸ್ಜಿದೇ ತೌಹೀದ್ ಬಳಿಯಿರುವ ಗಲ್ಲಿಯಲ್ಲಿ ಸಿಮೆಂಟ್ ಶೀಟಿನ ಬಾಡಿಗೆ ಕೊಠಡಿಯಲ್ಲಿರುವ ಈ ಕುಟುಂಬವನ್ನು ಮಾ.12 ರಂದು ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ರಶೀದ್ ವಿಟ್ಲ ಮತ್ತವರ ತಂಡ ಭೇಟಿಯಾಗಿ ಸಹಾಯಧನ ನೀಡಿ ಸನ್ಮಾನಿಸಿತು. 


ಈ ಸಂದರ್ಭದಲ್ಲಿ ಅಬೂಬಕರ್ ಪುತ್ತು ಉಪ್ಪಿನಂಗಡಿ, ಮಹಮ್ಮದ್ ಟಿ.ಕೆ. ಹಾಗೂ ಉಬೈದ್ ವಿಟ್ಲ ಬಝಾರ್ ಉಪಸ್ಥಿತರಿದ್ದರು.


ಬೀಬಿ ಫಾತಿಮಾ ತಾಯಿಗೆ ನಾಲ್ಕು ಹೆಣ್ಮಕ್ಕಳು. ಗಂಡು ಸಂತಾನವಿಲ್ಲ ಎಂಬ ಕಾರಣಕ್ಕೆ ಗಂಡನಾದವನು 19 ವರ್ಷದ ಹಿಂದೆ ಬಿಟ್ಟು ಹೋಗಿದ್ದ. ಇದರಿಂದ ನೊಂದ ಕುಟುಂಬ ಆ ಸಂದರ್ಭವೇ ಊರು ಬಿಟ್ಟು ಆತ್ಮಹತ್ಯೆಗೆ ಯತ್ನಿಸಿತ್ತು. ಆವಾಗ ಅವರ ನೆರವಿಗೆ ಬಂದವರು ಮಂಗಳಮುಖಿ ಬಿಕ್ಷುಕ ಅಕ್ರಮ್ ಪಾಷಾ. 


ಇವರು ಈ ಐದೂ ಮಂದಿಯನ್ನು ಮೈಸೂರಿಗೆ ಕರೆದುಕೋಂಡು ಬಂದು ಬಾಡಿಗೆ ಮನೆಯಲ್ಲಿಟ್ಟರು. ನಾಲ್ಕು ಮಕ್ಕಳಲ್ಲಿ ಹಿರಿಯವಳಾದ ಬೀಬಿ ಫಾತಿಮಾಳನ್ನು ದತ್ತು ತೆಗೆದುಕೊಂಡ ಮಂಗಳಮುಖಿ ಅಕ್ರಮ್ ಪಾಷಾ ಆಕೆಯ ಜೀವನ ಮತ್ತು ಸಾಧನೆಗೆ ಆಸರೆಯಾದರು. ಬಿಕ್ಷೆ ಬೇಡಿ ಸಾಕಿ ಸಲಹಿದ ಹುಡುಗಿ ಇದೀಗ ರಾಷ್ಟ್ರವೇ ಗುರುತಿಸುವ 'ಕಿಕ್ ಬಾಕ್ಸರ್' ಆಗಿ ಹೊರಹೊಮ್ಮಿದ್ದಾರೆ.


ತಂದೆಯ ತಿರಸ್ಕಾರ ಬೀಬಿ ಫಾತಿಮಾಳ ಈ ಹಠ ಮತ್ತು ಛಲಕ್ಕೆ ಕಾರಣ. ಗಂಡು ಮಕ್ಕಳಿಲ್ಲವೆಂದು ಬಿಟ್ಟು ಹೋದವನ ಮುಂದೆ ಗಂಡೆದೆಯಿಂದ ಬೀಗಬೇಕೆಂಬ ಕನಸು ನನಸಾಗುತ್ತಿರುವ ಸಂಭ್ರಮ ಬೀಬಿ ಫಾತಿಮಾಳದ್ದು. ಮಂಗಳಮುಖಿ ಮತ್ತು ಈ ಸಾಧಕಿ ಇಬ್ಬರೇ ಬಾಡಿಗೆ ಕೊಠಡಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಫಾತಿಮಾ 10ನೇ ತರಗತಿ ಓದುತ್ತಿದ್ದಾಳೆ. ಫಾತಿಮಾ ತಾಯಿ ಮತ್ತು ಇತರ 3 ಹೆಣ್ಮಕ್ಕಳಿಗೆ ಅಕ್ರಮ್ ಪಾಷಾ ಬೇರೆಯೇ ಬಾಡಿಗೆ ಮನೆ ಮಾಡಿಕೊಟ್ಟಿದ್ದಾರೆ. ಎರಡೂ ಮನೆಯ ಬಾಡಿಗೆಯನ್ನು 65ರ ಹರೆಯದ ಅಕ್ರಮ್ ಪಾಷಾ ಅವರೇ ಬಿಕ್ಷೆ ಬೇಡಿ ಕಟ್ಟುತ್ತಿದ್ದಾರೆ.

ಬೀಬಿ ಫಾತಿಮಾಳಿಗೆ ಈಗ 20ರ ಹರೆಯ. ಕೆಲ ವರ್ಷ ಕಾರಣಾಂತರ ಶಾಲೆ ಬಿಟ್ಟಿದ್ದಳು. ಕಳೆದ 12 ವರ್ಷದಿಂದ ಕಿಕ್ ಬಾಕ್ಸಿಂಗ್ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ತನಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ 29 ಗೋಲ್ಡ್ ಮೆಡಲ್ ಪಡೆದಿದ್ದಾರೆ. 

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಕೈ ನೋವಿದ್ದರೂ ಎರಡು ಬೆಳ್ಳಿ ಪದಕವನ್ನು ಗಳಿಸಿದ್ದಾರೆ. ಮುಂದಕ್ಕೆ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸಬೇಕೆಂಬ ಹೆಬ್ಬಯಕೆ ಆಕೆಯದ್ದು. ಜೊತೆಗೆ ತನ್ನ ಕುಟುಂಬವನ್ನು ಮತ್ತು ಸಾಕಿದ ವಯಸ್ಕರಾದ ಮಂಗಳಮುಖಿಯ ಜವಾಬ್ದಾರಿ ಬೀಬಿ ಫಾತಿಮಾ ಮೇಲಿದೆ. ಅದಕ್ಕಾಗಿ ಬಾಡಿಗೆ ಮನೆಯ ಮೇಲಿನ ಮಹಡಿಯಲ್ಲಿ ಶೀಟ್ ಹಾಕಿ ಕಿಕ್ ಬಾಕ್ಸಿಂಗ್ ಕೋಚಿಂಗ್ ಸೆಂಟರ್ ತೆರೆದು ದುಡಿಯಬೇಕೆಂಬ ಹಂಬಲ ಫಾತಿಮಾಳದ್ದು. ಆದರೆ ಇದಾವುದಕ್ಕೂ ಅವರಲ್ಲಿ ದುಡ್ಡಿಲ್ಲ. ಅದ್ಭುತ ಸಾಧಕಿಯ ಕನಸು ಕಮರದಂತೆ ನೋಡಬೇಕಾದ ಜವಾಬ್ದಾರಿ ಸಮಾಜದ ಮೇಲಿದೆ. ಸ್ವಂತ ಕಾಲಲ್ಲಿ ನಿಂತು ದುಡಿದು ಒಲಂಪಿಕ್ ತನಕ ತಲುಪಬೇಕೆಂಬ ಬೀಬಿ ಫಾತಿಮಾಳ ಕನಸು ಕಟ್ಟಿಕೊಂಡಿದ್ದು, ಅದಕ್ಕೆ ಸಮಾಜ ನೆರವಾಗಬೇಕಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article