
ಇರುವೈಲ್‌ನಲ್ಲಿ 30 ವಷ೯ಗಳಿಂದ ಹಂಚಿಕೆಯಾಗದ ನಿವೇಶನ: ಗ್ರಾಮಸಭೆಯಲ್ಲಿ ಅಳಲು ತೋಡಿಕೊಂಡ ಗ್ರಾಮಸ್ಥರು
ಮೂಡುಬಿದಿರೆ: ಇಲ್ಲಿ ಕಳೆದ ಮೂವತ್ತು ವಷ೯ಗಳಿಂದ ನಿವೇಶನ ರಹಿತರಿಗೆ ನಿವೇಶನ ಹಂಚಿಕೆಯಾಗದಿರುವುದರಿಂದ ಹಲವು ಬಡ ಕುಟುಂಬಗಳು ನಿವೇಶನವಿಲ್ಲದೆ ಬಾಡಿಗೆ ರೂಮಿನಲ್ಲಿದ್ದು ಇವರಿಗೆಲ್ಲಾ ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿಕೊಂಡಿರುವವರಿಂದ ತೆಗಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ ಘಟನೆ ಇರುವೈಲ್ ಗ್ರಾಮಸಭೆಯಲ್ಲಿ ನಡೆದಿದೆ.
ಪಂಚಾಯತ್ ಅಧ್ಯಕ್ಷೆ ಲಲಿತಾ ಮುಗೇರಾ ಅವರ ಅಧ್ಯಕ್ಷತೆಯಲ್ಲಿ ನಡೆದ ಇರುವೈಲ್ ಗ್ರಾ.ಪಂ.ನ ಎರಡನೇ ಸುತ್ತಿನ ಗ್ರಾಮಸಭೆಯಲ್ಲಿ ಈ ಬಗ್ಗೆ ಚಚೆ೯ ನಡೆಯಿತು.
ಈಗಾಗಲೇ ನಿವೇಶನಕ್ಕೆ ಕಾದಿರಿಸಲಾದ ಜಾಗವು ಪಟ್ಟಾಜಾಗದ ಕುಮ್ಮಿ ಜಾಗವೆಂದು ನ್ಯಾಯಾಲಯದಲ್ಲಿ ದಾವೆ ಹೂ ರಿರುವುದರಿಂದ ಪ್ರಕರಣವು ಹೈಕೋರ್ಟ್‌ನಲ್ಲಿದೆ. ಈ ಬಗ್ಗೆ ಹೈಕೋರ್ಟ್ ಮರುತನಿಖೆಗೆ ಜಿಲ್ಲಾಧಿಕಾರಿಗಳಿಗೆ ಆದೇಶವಾದರೂ ಮರುತನಿಖೆ ನಡೆದಿಲ್ಲ ಎಂದು ಪಂಚಾಯತ್ ಸದಸ್ಯ ವೆಲೇರಿಯನ್ ಕುಲುನ್ನ ಸಭೆಗೆ ತಿಳಿಸಿದರಲ್ಲದೆ ನಿವೇಶನ ರಹಿತರಿಗಾಗಿ ತೋಡಾರಿನಲ್ಲಿ ಸ್ವಲ್ಪ ಜಾಗವನ್ನು ಕಾಯ್ದಿರಿಸಲಾಗಿದ್ದು, ಅಗತ್ಯವಿರುವವರಿಗೆ ಆ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶವಿದೆ ಎಂದರು.
ಇರುವೈಲ್ ದಂಬೆದಕೋಡಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಪಿಡ್ಬ್ಲ್ಯೂಡಿ ಇಲಾಖೆಯಿಂದ ರಸ್ತೆ ಸರಿಪಡಿಸಲು ಅನುದಾನ ಒದಗಿಸಿ. 10 ದಿನದೊಳಗೆ ಅಭಿವೃದ್ಧಿ ಪಡಿಸದಿದ್ದರೆ ಧರಣಿ ಕುಳಿತುಕೊಳ್ಳಲಾಗುವುದೆಂದು ಸ್ಥಳೀಯರು ಎಚ್ಚರಿಕೆ ನೀಡಿದರು. ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿಗಳನ್ನು ನಿಯೋಜನೆ ಮಾಡಬೇಕು.
ಇರುವೈಲಿನಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಹಳೆ ಕಟ್ಟಡವನ್ನು ದುರಸ್ಥಿಗೊಳಿಸಲಾಗಿದ್ದು ಇಲ್ಲಿ ಆಯುಸ್ಮಾನ್ ಆರೋಗ್ಯ ಕೇಂದ್ರ ತೆರೆಯುವ ಬಗ್ಗೆ ಪ್ರಸ್ತಾಪವಿದ್ದು ಸಂಬಂಧಿಸಿದ ಇಲಾಖೆಯಿಂದ ಈ ಕಟ್ಟಡ ವನ್ನು ಆರೋಗ್ಯ ಕೇಂದ್ರಕ್ಕೆ ಹಸ್ತಾಂತರ ಮಾಡಬೇಕಾಗಿದೆ ಎಂದು ಪಿಡಿಓ ಶೇಖರ್ ತಿಳಿಸಿದರು.
ತೋಡಾರು ಗ್ರಾಮ ಮತ್ತು ಕಂದೊಟ್ಟು ಪ್ರದೇಶಗಳಲ್ಲಿ ವಿದ್ಯುತ್ ವಯರ್ ಗಳಿಗೆ ಗೆಲ್ಲುಗಳು ತಾಗುತ್ತಿರುವುದರ ಬಗ್ಗೆ ಗ್ರಾಮಸ್ಥರು ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರು. ಅರಣ್ಯ ಇಲಾಖೆಯ ಅಧಿಕಾರಿಗಳು ಅನುಮತಿ ನೀಡಿದರೆ ತೆರವುಗೊಳಿಸುವುದಾಗಿ ತಿಳಿಸಿದರು.
ಪಂಚಾಯತ್‌ದಿಂದ ಪತ್ರ ಬರೆಯುವಾಗ ಮೆಸ್ಕಾಂ ಮತ್ತು ಅರಣ್ಯ ಇಲಾಖೆಯವರಿಗೆ ಒಟ್ಟಿಗೆ ಬರೆಯಬೇಕು ಅಪಾಯಕಾರಿ ಮರಗಳನ್ನು ಮಳೆ ಪ್ರಾರಂಭವಾಗುವ ಮೊದಲೇ ವಿಲೇವಾರಿ ಆಗಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು.
94ಸಿ ಮತ್ತು 94ಸಿಸಿಯಲ್ಲಿ ಹಕ್ಕು ಪತ್ರ ಮಂಜೂರು ಆಗಲು ಬಾಕಿ ಇರುವ ಫಲಾನುಭವಿಗಳಿಗೆ ಶೀಘ್ರದಲ್ಲಿ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳುವುದು ಎಂದು ಪಿಡಿಓ ತಿಳಿಸಿದರು.
ಮೂಡಕ್ಕೆ ಒಳಪಡದ ಸರ್ವೆ ನಂಬರುಗಳ ಖಾತಾದಾರರು ಅಲೆದಾಡುತ್ತಿರುವುದು ಸಮಸ್ಯೆ ಆಗಿದೆ ಇದ್ದರಿಂದ ಇರುವೈಲನ್ನು ಮೂಡದಿಂದ ಕೈ ಬಿಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಪೂಪಾಡಿಕಲ್ಲು ಬಡಗ ಮಿಜಾರು ಸಂಪರ್ಕ ರಸ್ತೆಯಲ್ಲಿ ಬಡಗಮಿಜಾರುವರೆಗಿನ ರಸ್ತೆಯ ಅಗಲೀಕರಣ ಆಗಿ ಡಬ್ಬಲ್ ರೋಡ್ ಆಗಿದೆ. ಪೂಪಾಡಿಕಲ್ಲುವಿನಿಂದ ಮಜ್ಜಿ ಗುರಿವರೆಗಿನ ರಸ್ತೆ ಸಿಂಗಲ್ ಆಗಿದ್ದು ಇದನ್ನು ಡಬಲ್ ರೋಡ್ ಮಾಡಲು ಸಭೆಯಲ್ಲಿ ಆಗ್ರಹಿಸಿದರು.
ಜಲಜೀವನ್ ಮಿಶನ್ ಯೋಜನೆಯಲ್ಲಿ ತೋಡಾರ್ ಗ್ರಾಮಕ್ಕೆ 2 ಮೇಜರ್ ಟ್ಯಾಂಕ್, 4 ಕೊಳವೆ ಬಾವಿ ಅಗತ್ಯವಿದ್ದು ಮಂಜೂರು ಮಾಡುವಂತೆ, ಕುತ್ಯಾಡಿ ರಸ್ತೆಯಲ್ಲಿ ಚರಂಡಿ ರಚನೆ ಮಾಡುವಂತೆ ಆಗ್ರಹಿಸಿದರು.
ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿಯನ್ನು ನೀಡಿದರು. ಪಶು ವೈದ್ಯಾಧಿಕಾರಿ ಡಾ. ಮಲ್ಲಿಕಾರ್ಜುನ ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದರು.
ಗ್ರಾ.ಪಂ. ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ, ಕೆಡಿಪಿ ಪ್ರವೀಣ್ ಪೂಜಾರಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ಜಯರಾಮ್ ಪೂಜಾರಿ ಚಚೆ೯ಯಲ್ಲಿ ಪಾಲ್ಗೊಂಡಿದ್ದರು.
ಪಿಡಿಓ ಶೇಖರ್ ಅವರು ವಾಷಿ೯ಕ ವರದಿಯನ್ನು ಮಂಡಿಸಿದರು.