ವಸತಿ ಸಮುಚ್ಛಯಗಳ ಕೊಳಚೆ ನೀರು ಪೊನ್ನೆಚ್ಚಾರಿ ತೋಡಿಗೆ: ಪುರಸಭೆ ಆರೋಗ್ಯ ಅಧಿಕಾರಿಗಳಿಂದ ಪರಿಶೀಲನೆ, ಕ್ರಮ

ವಸತಿ ಸಮುಚ್ಛಯಗಳ ಕೊಳಚೆ ನೀರು ಪೊನ್ನೆಚ್ಚಾರಿ ತೋಡಿಗೆ: ಪುರಸಭೆ ಆರೋಗ್ಯ ಅಧಿಕಾರಿಗಳಿಂದ ಪರಿಶೀಲನೆ, ಕ್ರಮ


ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಪೊನ್ನೆಚ್ಚಾರು ಬಳಿ ಇರುವ ವಸತಿ ಸಮುಚ್ಚಯಗಳಿಂದ ಕೊಳಚೆ ನೀರನ್ನು ತೋಡಿಗೆ ಬಿಡುತ್ತಿದ್ದು ಇದರಿಂದಾಗಿ ವಾಸನೆ ಬೀರುತ್ತಿದೆಯಲ್ಲದೆ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ ಎನ್ನುವ ಸ್ಥಳೀಯರ ದೂರಿಗೆ ಸ್ಪಂದಿಸಿದ ಪುರಸಭೆಯ ಆರೋಗ್ಯಾಧಿಕಾರಿಗಳು ಗುರುವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ.


ಪುರಸಭಾ ಕಛೇರಿಯ ಸಮೀಪ ಪೇಟೆಯ ಬಳಿಯೇ ಇರುವ ಪೊನ್ನೆಚ್ಚಾರಿ ಸೇತುವೆ ಬಳಿ ಐದು ವಸತಿ ಸಮುಚ್ಛಯಗಳಿದ್ದು, ಅದರಲ್ಲಿನ ಬಹುತೇಕ ವಸತಿ ಸಮುಚ್ಛಯಗಳಿಂದ ಕೊಳಚೆ ನೀರನ್ನು ತೋಡಿಗೆ ಬಿಡಲಾಗುತ್ತಿದೆ. ಇದರಿಂದ ಪುರಸಭೆಯ ಕೊಳವೆ ಬಾವಿ, ಸುತ್ತಮುತ್ತಲಿನ ಮನೆಗಳ ಮೂರು ಬಾವಿಗಳ ನೀರು ಕಲುಷಿತಗೊಂಡಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಈ ಹಿಂದೆ ಸಂಬಂಧಪಟ್ಟವರಿಗೆ ಹಲವು ವರ್ಷಗಳಿಂದ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. 


ಆರೋಗ್ಯಾಧಿಕಾರಿ ಶಶಿರೇಖಾ ಮಾಧ್ಯಮದವರೊಂದಿಗೆ ಮಾತನಾಡಿ, ಸ್ಥಳೀಯರ ದೂರಿನ ಆಧಾರದಲ್ಲಿ ಸ್ಥಳ ಪರಿಶೀಲನೆ ಮಾಡಿದ್ದೇವೆ. ಒಂದು ವಸತಿ ಸಮುಚ್ಛಯದವರು ಕೊಳಚೆ ನೀರನ್ನು ಫಿಲ್ಟರ್ ಮಾಡಿ ಬಿಡುತ್ತಿರುವುದಾಗಿ ತಿಳಿಸಿದ್ದಾರೆ. ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಅದರ ವರದಿ ಬರುವವರೆಗೆ ನೀರನ್ನು ತೋಡಿಗೆ ಬಿಡದಂತೆ ಸೂಚಿಸಿದ್ದೇನೆ. ತೋಡಿಗೆ ಕೊಳಚೆ ನೀರು ಬಿಡುತ್ತಿರುವ ಇತರ ವಸತಿ ಸಮುಚ್ಛಯಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article