
ಮಂಗಳೂರು ವಿವಿ: ವೀಕ್ಷಿತಾ ಮೊದಲ ರ‍್ಯಾಂಕ್
Thursday, March 13, 2025
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ನಡೆದ ಸ್ನಾತಕೋತ್ತರ ಪದವಿಯ ಐಚ್ಛಿಕ ಕನ್ನಡ ವಿಷಯದ ಅಂತಿಮ ಸೆಮಿಸ್ಟರ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಅಂದರೆ 8.43 ಸಿಜಿಪಿಎ ಗಳಿಸುವ ಮೂಲಕ ವೀಕ್ಷಿತಾ ಮೊದಲನೇ ರ‍್ಯಾಂಕ್ ಪಡೆದುಕೊಂಡಿದ್ದಾಳೆ.
ನಗರದ ಕುತ್ತಾರಿನಲ್ಲಿ ವಾಸವಾಗಿರುವ ಸುಜಾತ ಮತ್ತು ವಿವೇಕಾನಂದ ದಂಪತಿಗಳ ಪುತ್ರಿಯಾಗಿರುವ ವೀಕ್ಷಿತಾಗೆ ಬಡತನ ಓದಿಗೆ ಯಾವುದೇ ಅಡ್ಡಿಯಾಗಲಿಲ್ಲ. ಕಡು ಬಡತನದಲ್ಲೇ ತಮ್ಮ ಮಗಳ ಓದಿಗೆ ಶ್ರಮಿಸಿದ ಪೋಷಕರ ಶ್ರಮ ಸಾರ್ಥಕವಾಗಿದೆ. ತಾಯಿ ಸುಜಾತ ಅವರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಶುಚಿತ್ವ ದಳದ ಗುತ್ತಿಗೆ ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ತಮ್ಮ ಮಗಳ ಈ ಸಾಧನೆಯನ್ನು ಕಂಡು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ವಿಜೇತ ಅವರ ಸಾಧನೆಗೆ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರು ಸೇರಿದಂತೆ ವಿಶ್ವವಿದ್ಯಾನಿಲಯ ಆಡಳಿತ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.