
ಆಳ್ವಾಸ್ ಹಾಗೂ ಕಾಂಪ್ ಕ್ಲೌಡ್ ಐಟಿ ಸರ್ವಿಸಸ್ ಒಡಂಬಡಿಕೆ: ಸುರಕ್ಷಿತ, ವಿಶ್ವಾಸಾರ್ಹ ಐಟಿ ತಂತ್ರಜ್ಞಾನ ವ್ಯವಸ್ಥೆಗೆ ಒಪ್ಪಂದ
ಮೂಡುಬಿದಿರೆ: ಎಜುಕೇಶನ್ ಡೆಸ್ಕಟಾಪ್-ಆಸ್-ಎ-ಸರ್ವೀಸ್ ಮೂಲಕ ಸಂಸ್ಥೆಯಲ್ಲಿನ ದತ್ತಾಂಶಗಳ ವ್ಯವಸ್ಥಿತ ನಿರ್ವಹಣೆಗಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮಾಹಿತಿ ತಂತ್ರಜ್ಞಾನದ ಮೂಲಸೌಕರ್ಯಗಳನ್ನು ಒದಗಿಸುವ ಕಾಂಪ್ ಕ್ಲೌಡ್ ಐಟಿ ಸರ್ವಿಸಸ್‌ನ ಜೊತೆಗೆ ಮುಂದಿನ ೫ ವರ್ಷಗಳಿಗೆ ಒಡಂಬಡಿಕೆ ಮಾಡಿಕೊಂಡಿದೆ.
ಈ ವ್ಯವಸ್ಥೆಯ ನೆರವಿನಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ತನ್ನ ಸಂಸ್ಥೆಗಳಲ್ಲಿ ವರ್ಚುವಲ್ ಡೆಸ್ಕ್ ಟಾಪ್ ಸೌಕರ್ಯವನ್ನು ಪ್ರತಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಪ್ರತ್ಯೇಕವಾಗಿ ಒದಗಿಸಿದ್ದು, ಈ ಮೂಲಕ ಸಾಫ್ಟ್ವೇರ್ ಡಿಫೈನ್ಡ್ ನೆಟ್‌ವರ್ಕ್ ಜತೆಗೆ ಕೇಂದ್ರೀಕೃತ ಗಣಕ ನಿರ್ವಹಣಾ ವ್ಯವಸ್ಥೆಯನ್ನು ಮಾಡಲಾಗಿದೆ. ಸಾಂಪ್ರದಾಯಿಕ ಡೆಸ್ಕಟಾಪ್ಗಳಿಗೆ ಹೋಲಿಸಿದರೆ, ಎಜುಕೇಶನ್ ಡೆಸ್ಕಟಾಪ್-ಆಸ್-ಎ-ಸರ್ವೀಸ್ ವ್ಯವಸ್ಥೆಯ ಮೂಲಕ ಶೇ.೮೦ ವಿದ್ಯುತ್ ಉಳಿತಾಯವಾಗಲಿದೆ.
ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ದೀರ್ಘ ಬಾಳಿಕೆ ಇರದ ವಸ್ತುಗಳ ಮೇಲೆ ಹೂಡಿಕೆ ಮಾಡುವುದರಿಂದ ಮತ್ತಷ್ಟು ದುಂದು ವೆಚ್ಚ ಉಂಟಾಗುತ್ತದೆ. ಮಾಹಿತಿ ತಂತ್ರಜ್ಞಾನದ ಮೂಲ ಸೌಕರ್ಯಗಳ ಸವಾಲುಗಳನ್ನು ಸಮರ್ಪಕವಾಗಿ ನಿರ್ವಹಿಸಲು ಐಟಿ ಸರ್ವಿಸಸ್‌ಗಳ ಅಗತ್ಯ ಇದೆ. ಎಜುಕೇಶನ್ ಡೆಸ್ಕಟಾಪ್-ಆಸ್-ಎ-ಸರ್ವೀಸ್ ಮೂಲಕ ಹೆಚ್ಚು ಸುರಕ್ಷಿತ, ವಿಶ್ವಾಸಾರ್ಹ, ಕಡಿಮೆ ವೆಚ್ಚದಲ್ಲಿ ಸಂಪೂರ್ಣ ನಿರ್ವಹಣೆಯ ಪರಿಹಾರಗಳನ್ನು ಒದಗಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.
ತರಗತಿ ಕೊಠಡಿಗಳನ್ನು ಸ್ಮಾರ್ಟ್ ಲರ್ನಿಂಗ್ ಸ್ಪೇಸ್‌ಗಳಾಗಿ ರೂಪಿಸುವ ಮೂಲಕ, ವಿದ್ಯಾರ್ಥಿಗಳಿಗೆ ವೈಯಕ್ತಿಕ ಕಲಿಕೆ ಅನುಭವ ನೀಡಲು ಸಾಧ್ಯ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥೆಯಲ್ಲಿ ಈ ತಂತ್ರಜ್ಞಾನದ ಆಳವಡಿಕೆಯಿಂದ ವಿದ್ಯಾರ್ಥಿಗಳನ್ನು ಉದ್ಯಮಸಿದ್ದ ವೃತ್ತಿಪರರನ್ನಾಗಿಸಲು ಸಹಕಾರಿಯಾಗಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.
ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಕಾಂಪ್ ಕ್ಲೌಡ್ ಐಟಿ ಸರ್ವಿಸಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಪೈ, ಆಳ್ವಾಸ್ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ.ಎನ್.ಪಿ ನಾರಾಯಣ ಶೆಟ್ಟಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಣಕಾಸು ಅಧಿಕಾರಿ ಶಾಂತರಾಮ ಕಾಮತ್, ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.