
ಮೂಡುಬಿದಿರೆ ಪುರಸಭಾ ಸಾಮಾನ್ಯ ಸಭೆ: ತೆರಿಗೆ ಪರಿಷ್ಕರಣೆಗೆ ಸಹಮತ ನೀಡದ ಸದಸ್ಯರು
ಮೂಡುಬಿದಿರೆ: ಪದೇ ಪದೇ ಆಸ್ತಿ ತೆರಿಗೆ ಪರಿಷ್ಕರಣೆ ಮಾಡುವುದರಿಂದ ಜನ ಸಾಮಾನ್ಯರಿಗೆ ಹೊರೆಯಾಗುತ್ತದೆ ಆದ್ದರಿಂದ ಈ ವಷ೯ ತೆರಿಗೆ ಪರಿಷ್ಕರಣೆ ಮಾಡುವುದು ಬೇಡ ಎಂದು ಪುರಸಭಾ ಸದಸ್ಯರೆಲ್ಲರೂ ಸಾಮಾನ್ಯ ಸಭೆಯಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಪುರಸಭಾ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪುರಸಭಾ ಕಂದಾಯ ನಿರೀಕ್ಷಕಿ ಅವರು 2025-26ನೇ ಸಾಲಿನ ಆಸ್ತಿ ತೆರಿಗೆ ಶೇ. 3ರಿಂದ 5ರವರೆಗೆ ಹೆಚ್ಚಳ ಮಾಡುವ ಬಗ್ಗೆ ಸರಕಾರದ ಸುತ್ತೋಲೆ ಬಂದಿರುವ ಬಗ್ಗೆ ಮಾಹಿತಿ ನೀಡುತ್ತಿದ್ದಾಗ ಮಾತನಾಡಿದ ಸದಸ್ಯ ಸುರೇಶ್ ಪ್ರಭು ಅವರು ಸ್ವಲ್ಪ ಹೆಚ್ಚೆಂದರೆ ರೂ 200 ಇದ್ದದ್ದು 700 ಆಗುತ್ತದೆ ಆದ್ದರಿಂದ ಈ ವಷ೯ ತೆರಿಗೆ ಪರಿಷ್ಕರಣೆ ಮಾಡುವುದು ಬೇಡ ಎಂದಾಗ ಹೆಚ್ಚಿನ ಸದಸ್ಯರು ಬೆಂಬಲ ಸೂಚಿಸಿದರು.
ತೆರಿಗೆ ಹೆಚ್ಚಳ ಮಾಡದಿದ್ದರೆ 15ನೇ ಹಣಕಾಸು ಯೋಜನೆಯ ಅನುದಾನವನ್ನು ಸರಕಾರವು ತಡೆಹಿಡಿಯುತ್ತದೆ ಇದರಿಂದಾಗಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಳ್ಳುತ್ತವೆ ಎಂದು ಮುಖ್ಯಾಧಿಕಾರಿ ಇಂದು ಎಂ. ತಿಳಿಸಿದರು.
ಜೋತು ಬಿದ್ದಿರುವ ಕೇಬಲ್ ವಯರ್ ಗಳನ್ನು ಮತ್ತು ತಂತಿಗಳಗನ್ನು ಅಪಾಯ ಸಂಭವಿಸುವ ಮೊದಲೇ ತೆಗೆಯಬೇಕು ಅಲ್ಲದೆ ಕಂಬಗಳಲ್ಲಿ ಕಾಯ೯ಕ್ರಮಗಳಿಗೆ ಶುಭಾಶಯಗಳನ್ನು ಕೋರಿ ಹಾಕಲಾಗಿರುವ ಫ್ಲೆಕ್ಸ್ ಗಳನ್ನು ತಕ್ಷಣ ತೆರವುಗೊಳಿಸಬೇಕೆಂದು ಸದಸ್ಯರಾದ ರಾಜೇಶ್ ನಾಯ್ಕ್ ಮೆಸ್ಕಾಂ ಅಧಿಕಾರಿ ಅಧಿಕಾರಿಗಳ ಗಮನಕ್ಕೆ ತಂದರು.
ಅದಕ್ಕೆ ಕೇವಲ ಎಸ್ ಓ ಅವರು ಮಾತ್ರ ಜವಾಬ್ದಾರಲ್ಲ ಅವರು ಕರೆಂಟ್ ಶಾಕ್ ಆದ ನಂತರ ಬರುತ್ತಾರೆ. ಇದರಲ್ಲಿ ನಮ್ಮ ಪುರಸಭೆಯ ಜವಾಬ್ದಾರಿಯಿದೆ. ಅಧಿಕೃತವಾಗಿ ಫ್ಲೆಕ್ಸ್ ಹಾಕಿದವರು ಸಮಯ ಮುಗಿದರೂ ತೆಗೆಯದಿದ್ದರೆ ಅಂತವರ ಪರವಾನಿಗೆಯನ್ನು ರದ್ದುಗೊಳಿಸಿ ಎಂದು ಸದಸ್ಯ ಕೊರಗಪ್ಪ ಹೇಳಿದರು.
ಒಂದು ಕಾಮಗಾರಿಯನ್ನು ವಹಿಸಿಕೊಂಡು ಆ ಕಾಮಗಾರಿಯನ್ನು ಪೂಣ೯ಗೊಳಿಸದೆ ಇರುವ ಗುತ್ತಿಗೆದಾರನಿಗೆ ಇನ್ನೊಂದು ಕಾಮಗಾರಿಯ ಗುತ್ತಿಗೆ ನೀಡಬಾರದೆಂದು ಸದಸ್ಯ ಪುರಂದರ ದೇವಾಡಿಗ ಆಗ್ರಹಿಸಿದರು.
ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್ ಮಾತನಾಡಿ ಬಜೆಟ್ ನಲ್ಲಿ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ಮತ್ತು ಮಕ್ಕಳ ಹಿತರಕ್ಷಣೆಗಾಗಿ, ನೀರಿನ ಸಮಸ್ಯೆ ನೀಗಿಸಲು ಹೆಚ್ಚಿನ ಅನುದಾನ ಇಡಬೇಕೆಂದ ಅವರು ಪೊನ್ನೆಚ್ಚಾರಿ ಚಚ್೯ ಬಳಿ ಕೊಳಚೆ ನೀರು ಹರಿದು ಹೋಗುತ್ತಿದೆ ಇದು ಎಲ್ಲಿಂದ ಬರುತ್ತಿದೆ ಎಂದು ಪತ್ತೆ ಹಚ್ಚಿ ನಿಲ್ಲಿಸಿ ತಕ್ಷಣ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಪುರಸಭಾ ಸದಸ್ಯರು ಸಮಸ್ಯೆಯನ್ನು ಆಲಿಸಲು ಹೋದಾಗ ಅವಾಚ್ಯ ಪದಗಳಿಂದ ಬೈದು ಹಲ್ಲೆ ನಡೆಸಲು ಬರುವವರ ವಿರುದ್ಧ ಪುರಸಭೆಯು ಪೊಲೀಸರಿಗೆ ದೂರು ನೀಡಬೇಕೆಂದು ನಿಣ೯ಯ ಕೈಗೊಳ್ಳುವಂತೆ ಸದಸ್ಯರಾದ ಕೊರಗಪ್ಪ, ಸುರೇಶ್ ಕೋಟ್ಯಾನ್ ಆಗ್ರಹಿಸಿದರು.
ಮೂಡುಬಿದಿರೆ ಖಾಸಗಿ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಹೋಗುವುದರಿಂದ ಬಸ್ ಗಳು ನಿಲ್ಲಲು ಜಾಗ ಇಲ್ಲದಂತ್ತಾಗಿದೆ ಆದ್ದರಿಂದ ಲಾಕ್ ಮಾಡಿ ಹೋಗುವ ವಾಹನಗಳನ್ನು ಪೊಲೀಸರು ಎತ್ತಿಕೊಂಡು ಹೋಗುವಂತೆ ತಿಳಿಸಿ ಮತ್ತು ಮೂರು ದಿನ ಮೈಕ್ ಮೂಲಕ ಪ್ರಚಾರ ಮಾಡುವಂತೆ ಸದಸ್ಯರು ಆಗ್ರಹಿಸಿದರು.
ಪೊನ್ನೆಚ್ಚಾರಿ ರಸ್ತೆ ಬದಿ ಪೈಪ್ ಅಳವಡಿಸಲು ಚರಂಡಿ ಮಾಡಿ ಮಣ್ಣನ್ನು ರಸ್ತೆಗೆ ಹಾಕಲಾಗಿದ್ದು ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಕೆಲವು ಜನರು ಬಿದ್ದಿದ್ದಾರೆ ಆದ್ದರಿಂದ ತಕ್ಷಣ ಕಾಮಗಾರಿಯನ್ನು ಪೂಣ೯ಗೊಳಿಸುವಂತೆ ಆಗ್ರಹಿಸಿದರು.
ಉಪಾಧ್ಯಕ್ಷ ನಾಗರಾಜ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸ್ವಾತಿ ಪ್ರಭು, ಸದಸ್ಯರಾದ ದಿವ್ಯ ಜಗದೀಶ್, ರೂಪಾ ಶೆಟ್ಟಿ, ಪಿ. ಕೆ. ಥೋಮಸ್, ಇಕ್ಬಾಲ್ ಕರೀಂ, ಶ್ವೇತಾ ಜೈನ್, ಸೌಮ್ಯ ಶೆಟ್ಟಿ, ಎಂಜಿನಿಯರ್ ರಾಜೇಶ್ ಚಚೆ೯ಯಲ್ಲಿ ಪಾಲ್ಗೊಂಡಿದ್ದರು.