
ಪ್ರತಿಭಟನೆಯಲ್ಲಿ ಪೊಲೀಸರಿಗೆ ದೌರ್ಜನ್ಯ-ಬಿಜೆಪಿಯ ಗೂಂಡಾಮನೋಸ್ಥಿತಿ ಪ್ರತೀಕ: ಕೆ.ಪಿ. ಆಳ್ವ
ಪುತ್ತೂರು: ದರ್ಬೆ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆಯ ಹಿನ್ನಲೆಯಲ್ಲಿ ಪೊಲೀಸರ ವಿರುದ್ಧ ಅಸಂವಿಧಾನಿಕ ಪದಗಳನ್ನು ಬಳಕೆ ಮಾಡಿರುವುದು ಹಾಗೂ ದೌರ್ಜನ್ಯ ನಡೆಸಿರುವುದು ಬಿಜೆಪಿ ಗೂಂಡಾ ಮನೋಸ್ಥಿತಿಯ ಪ್ರತೀಕವಾಗಿದೆ. ಈ ಬಗ್ಗೆ ಪೊಲೀಸರು ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಪುತ್ತೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಆಗ್ರಹಿಸಿದ್ದಾರೆ.
ಪುತ್ತೂರಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸಿಕೊಳ್ಳಲಾಗದ ಬಿಜೆಪಿ ಜನತೆಯನ್ನು ಹಾದಿ ತಪ್ಪಿಸುವ ಉದ್ದೇಶದಿಂದ ಪ್ರತಿಭಟನೆ ಮಾಡಿದ್ದಾರೆ. ಈ ಸಂದರ್ಭ ಪೊಲೀಸರಿಗೆ ಅವ್ಯಾಚ್ಛ ಶಬ್ದಗಳ ಬಳಕೆ ಮಾಡಿದ್ದಾರೆ. ಪೊಲೀಸರನ್ನು ದೂಡಿ ಹಾಕಿ ದೌರ್ಜನ್ಯವೆಸಗಿದ್ದಾರೆ. ಇಂತಹ ಗೂಂಡಾಗಿರಿಯನ್ನು ಸಹಿಸಲು ಸಾಧ್ಯವಿಲ್ಲ. ಈ ಘಟನೆಯನ್ನು ಅತ್ಯುಗ್ರವಾಗಿ ಖಂಡಿಸುವುದಾಗಿ ತಿಳಿಸಿರುವ ಅವರು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕ್ರಿಕೆಟ್ ಕ್ರೀಡಾಂಗಣ, 20 ಎಕ್ರೆ ಜಾಗದಲ್ಲಿ ತಾಲೂಕು ಕ್ರೀಡಾಂಗಣ, ಕೆಎಂಎಫ್ ಗೆ ಜಾಗ, ಕೊಯಿಲ ದಲ್ಲಿ ಪಶು ವೈದ್ಯಕೀಯ ಆಸ್ಪತ್ರೆ, ಮೆಡಿಕಲ್ ಕಾಲೇಜು ಮಂಜೂರು, ನೂರಾರು ಯುವಕರಿಗೆ ಸ್ವಂತ ಪ್ರಯತ್ನದಿಂದ ಉದ್ಯೋಗ, ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಯೋಜನೆ, ಉಪ್ಪಿನಂಗಡಿ ದೇವಸ್ಥಾನದ ಅಭಿವೃದ್ಧಿಗೆ ಯೋಜನೆ, ೧೧೦೦ ಕೋಟಿಯ ನೀರಾವರಿ ಯೋಜನೆ ಹೀಗೆ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಸಮಾರೋಪಾದಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿಯನ್ನು ಕಂಡು ಮಾಜಿ ಶಾಸಕ ಮಠಂದೂರು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಕ್ಕಲಿಗರಿಗೆ ಮಾಡಿದ ಅಪಮಾನ:
ಕರಾವಳಿ ಜಿಲ್ಲೆಯ ಪ್ರಗತಿಯನ್ನು ಬಯಸುವ ಕಾಂಗ್ರೇಸ್ ಪಕ್ಷದ ನೇತಾರ ಹಾಗೂ ಒಕ್ಕಲಿಗ ಸಮುದಾಯ ನಾಯಕನಾಗಿರುವ ಡಿ.ಕೆ.ಶಿವಕುಮಾರ್ ಅವರ ಪ್ರತಿಕೃತಿ ದಹನ ಮಾಡುವ ಮೂಲಕ ಬಿಜೆಪಿಗರು ಒಕ್ಕಲಿಗೆ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಕರಾವಳಿಯ ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ. ಕರಾವಳಿ ಜನತೆ ಬದಲಾಗಿದ್ದಾರೆ. ಅಭಿವೃದ್ಧಿಯನ್ನು ಬಯಸುತ್ತಿದ್ದಾರೆ. ಬಿಜೆಪಿಯ ಕಪಟ ನಾಟಕವನ್ನು ಯಾರೂ ನಂಬುವುದಿಲ್ಲ. ಜನ ನಿಮ್ಮನ್ನು ತಿರಸ್ಕರಿಸಲು ಆರಂಭಿಸಿದ್ದಾರೆ ಎಂದು ಅವರು ಹೇಳಿದ್ದಾರೆ.