
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಜಾಗದ ಮನೆ ತೆರವು
ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಜಾಗದ ಮನೆ ತೆರವು ಕಾರ್ಯ ಮುಂದುವರಿದ್ದು, ಶನಿವಾರ ಬಪ್ಪಳಿಗೆಯ ಉಳ್ಳಾಲ್ತಿ ನಡೆಯಲ್ಲಿದ್ದ ಕೃಶ್ಚಿಯನ್ ಸಮುದಾಯಕ್ಕೆ ಸೇರಿದ ಜೆರಮ್ ಸೆರಾವೋ ಅವರ ಒಪ್ಪಿಗೆಯ ಮೇರೆಗೆ ಮನೆಯನ್ನು ತೆರವು ಮಾಡಲಾಗಿದೆ.
ಮನೆಯ ಫಲಾನುಭವಿಯಾದ ಜೆರಮ್ ಸೆರಾವೋ ಮಾತನಾಡಿ 16 ವರ್ಷದ ಹಿಂದೆ ಎಗ್ರಿಮೆಂಟ್ ಮೂಲಕ 7 ಸೆಂಟ್ಸ್ ಜಾಗವನ್ನು ಪಡೆದುಕೊಳ್ಳಲಾಗಿತ್ತು. ಮನೆ ಮಾತ್ರ ನಮ್ಮ ಹೆಸರಿನಲ್ಲಿದ್ದು, ಜಾಗ ದೇವಸ್ಥಾನದ ಹೆಸರಿನಲ್ಲಿದೆ. ದೇವಸ್ಥಾನಕ್ಕೆ ವಾರ್ಷಿಕವಾಗಿ 1100ರೂ. ಬಾಡಿಗೆಯನ್ನು ಪಾವತಿಸಿಕೊಂಡು ಬರುತ್ತಿದ್ದೇವೆ. ಪರ್ಲಡ್ಕದಲ್ಲಿ ಮನೆಯಿದ್ದು, ಐದು ತಿಂಗಳಿಂದ ಈ ಮನೆಯನ್ನು ಬಾಡಿಗೆಗೆ ನೀಡಿದ್ದೆವು. ಈಗ ದೇವಸ್ಥಾನ ಅಭಿವೃದ್ಧಿ ಕಾರ್ಯಕ್ಕಾಗಿ ಜಾಗವನ್ನು ಬಿಟ್ಟುಕೊಡುತ್ತಿದ್ದೇವೆ ಎಂದರು.
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ದೇವಸ್ಥಾನದ ಜಾಗವನ್ನು ಸರ್ವೇ ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಸಿಗದಿತ 35 ಸಾವಿರವನ್ನು ಪಾವತಿ ಮಾಡಲಾಗಿದೆ. ಜಾಗ ಇದೆ ಎಂಬುದನ್ನು ತಿಳಿದು ಮಾತನಾಡಿಸಿದಾಗ ಸಂತೋಷದಿಂದ ಬಿಟ್ಟುಕೊಡಲು ಒಪ್ಪಿದ್ದಾರೆ. ಮನೆಯ ಹೆಂಚುಗಳನ್ನು ಅವರಿಗೆ ಬೇಕಾದ ಸ್ಥಳಕ್ಕೆ ತಲುಪಿಸುತ್ತಿದ್ದೇವೆ. ಬಜೆಟ್ ನಲ್ಲಿಯೂ ಹಿಂದು ದೇವಸ್ಥಾನದ ಆಸ್ತಿಗಳನ್ನು ಸರ್ವೇ ಮಾಡಿ ಸುಪರ್ದಿಗೆ ಪಡೆದುಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ದೇವಸ್ಥಾನದ ಜಾಗವನ್ನು ದೇವರಿಗೆ ಅರ್ಪಣೆ ಮಾಡಬೇಕಾಗಿ ವಿನಂತಿಸಿದರು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ ಪ್ರಶ್ನಾಚಿಂತನೆಯಲ್ಲಿ ಕಂಡುಬಂದ ಪರಿಹಾರ ಕಾರ್ಯಗಳು ಮಾ.೯ರಿಂದ ನಡೆಯಲಿದ್ದು, ಈಗಾಗಲೇ ತೆರವು ಮಾಡಿದ ಮನೆಗಳ ಎಲ್ಲಾ ಸದಸ್ಯರಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಈಗಾಗಲೇ ಮಾಹಿತಿಯನ್ನು ನೀಡಲಾಗಿದೆ ಎಂದರು.
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಕುಮಾರ್ ಸುವರ್ಣ, ಈಶ್ವರ ನಾಯ್ಕ, ಕಾರ್ಯನಿರ್ವಣಾಧಿಕಾರಿ ಕೆ. ವಿ. ಶ್ರೀನಿವಾಸ್, ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ, ಕಾಂಗ್ರೆಸ್ ಮುಖಂಡರಾದ ರಂಜಿತ್ ಬಂಗೇರ, ಸನತ್ ರೈ, ನಿಹಾಲ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.