
ಸಂತ ಫಿಲೋಮಿನಾ ಕಾಲೇಜಿನಲ್ಲಿ ಯುವನಿಧಿ ನೋಂದಣಿ ಶಿಬಿರ ಹಾಗೂ ಸಂವಾದ ಕಾರ್ಯಕ್ರಮ
Monday, March 10, 2025
ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸಹಯೋಗದೊಂದಿಗೆ ಯುವನಿಧಿ ನೋಂದಣಿ ಶಿಬಿರ ಹಾಗೂ ಸಂವಾದ ಕಾರ್ಯಕ್ರಮವು ಸಂತ ಫಿಲೋಮಿನಾ ಕಾಲೇಜಿನ ಎಸ್‌ಜೆಎಂ ಸಭಾಂಗಣದಲ್ಲಿ ಇಂದು ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಇವರು ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸರ್ಕಾರದ ಯೋಜನೆಗಳ ಪ್ರಯೋಜನ ಮಾತ್ರ ಪಡೆದುಕೊಳ್ಳದೇ ಒಬ್ಬ ಪ್ರಜ್ಞಾವಂತ ನಾಗರಿಕನಾಗಿ ದೇಶಕ್ಕೆ ತಮ್ಮಿಂದ ಏನು ನೀಡಬಹುದು ಎಂದು ಯೋಚಿಸಬೇಕು ಎಂಬ ಸಲಹೆ ನೀಡಿದರು.
ಈ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪುತ್ತೂರು ಇದರ ಅಧ್ಯಕ್ಷ ಉಮಾನಾಥ ಶೆಟ್ಟಿ ಭಾಗವಹಿಸಿ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಯುವ ನಿಧಿ ಯೋಜನೆ ಹಾಗೂ ಇತರ ಲಭ್ಯವಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮಂಗಳೂರು ಇದರ ಅಧಿಕಾರಿ ಅರುಣ್ ಕುಮಾರ್ ಇವರು ಯುವ ನಿಧಿ ನೋಂದಣಿ ಪ್ರಕ್ರಿಯೆ ಕುರಿತಾದ ಸಂಪೂರ್ಣ ಮಾಹಿತಿ ನೀಡಿ ವಿದ್ಯಾರ್ಥಿಗಳ ಗೊಂದಲ ನಿವಾರಣೆ ಮಾಡಿದರು. ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗದ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಕಾಶ್, ಈ ವಿಭಾಗದ ಇನ್ನೊಬ್ಬ ಅಧಿಕಾರಿ ಸುರೇಶ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅಹವಾಲುಗಳನ್ನು ಸ್ವೀಕರಿಸಿದರು.
ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ಅಬ್ಬು ನವಾಗ್ರಮ ಹಾಗೂ ಕಾಲೇಜಿನ ಯುವನಿಧಿ ಯೋಜನೆಯ ಸಂಯೋಜಕ ಪ್ರವೀಣ್ ಡಿ. ಉಪಸ್ಥಿತರಿದ್ದರು.