
ಕುಕ್ಕೆ: ಮಾಂಗಲ್ಯ ಭಾಗ್ಯ ಸರಳ ಸಾಮೂಹಿಕ ವಿವಾಹ
ಸುಬ್ರಹ್ಮಣ್ಯ: ಕರ್ನಾಟಕ ಸರಕಾರ, ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂಧರ್ಮದಾಯಿ ದತ್ತಿ ಇಲಾಖೆ, ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಮಾಂಗಲ್ಯ ಭಾಗ್ಯ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಸೋಮವಾರ ಆದಿ ಸುಬ್ರಹ್ಮಣ್ಯದ ಕಲ್ಯಾಣ ಮಂಟಪದಲ್ಲಿ ನಡೆಯಿತು. 10 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಪೂರ್ವಾಹ್ನ ಗಂಟೆ 11ರಿಂಂದ 12ರ ವೃಷಭ ಲಗ್ನದಲ್ಲಿ ವಿವಾಹ ಮುಹೂರ್ತ ನೆರವೇರಿತು. ವಿವಿಧೆಡೆಯ 10 ನವ ಜೋಡಿಗಳು ಪರಸ್ಪರ ಹಾರ ಬದಲಾಯಿಸುವುದರೊಂದಿಗೆ ಸಪ್ತಪದಿ ತುಳಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಪುರೋಹಿತ ಮಧುಸೂಧನ ಕಲ್ಲೂರಾಯ ಅವರ ನೇತೃತ್ವದಲ್ಲಿ ಅರ್ಚಕ ವರ್ಗದವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬಲಡ್ಕ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಲೋಲಾಕ್ಷ ಕೈಕಂಬ, ಅಚ್ಯುತ ಗೌಡ ಬಳ್ಪ, ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್ ಮತ್ತಿತರರು, ನವಜೋಡಿಗಳ ಮನೆಯವರು, ಸ್ನೇಹಿತರು ಭಾಗವಹಿಸಿ ವಧು-ವರರಿಗೆ ಶುಭಹಾರೈಸಿದರು.
ದೇವಳದಿಂದ ಸವಲತ್ತು:
ಸರಳ ಸಾಮೂಹಿಕ ವಿವಾಹದಲ್ಲಿ ವಿವಾಹವಾಗುವವರಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವತಿಯಿಂದ ವಧುವಿಗೆ ರೂ.48,000 ಮೌಲ್ಯದ ತಾಳಿ ಕಂಠಿ, ಹಾಗೂ ಕಾಲುಂಗುರ, ಸೀರೆ, ರವಿಕೆ, ಹಾರ ಖರೀದಿಸಲು ರೂ.10,000 ಹಾಗೂ ವರನಿಗೆ ಶರ್ಟ್, ವೇಸ್ಟಿ, ಪೇಟ ಖರೀದಿಸಲು ರೂ. 5,000 ಹಣ ನೀಡಲಾಗುತ್ತದೆ.
ಹಸೆಮಣೆಯೇರಿದ 10 ಜೋಡಿಗಳು:
ಕಿಶೋರ್ ಕೆ.ಜಿ. ಕೊರತ್ತೋಡಿ ಮತ್ತು ಕಾವ್ಯಶ್ರೀ ಪಿ. ಬಾಳುಗೋಡು, ರಘು ಮಂಡೆಕೋಲು ಮತ್ತು ಚಂದ್ರಾವತಿ ಕಬಕ, ಮಂಜುನಾಥ ಸುಬ್ರಹ್ಮಣ್ಯ ಮತ್ತು ಪ್ರಮೀಳ ಸಕಲೇಶಪುರ, ರಂಜಿತ್ ಗುಂಡ್ಯ ಮತ್ತು ದಿವ್ಯ ಪೆರ್ಲಂಪಾಡಿ, ನವೀನ ವಿಟ್ಲ ಮತ್ತು ಸ್ವಾತಿ ಮರ್ಕಂಜ, ಸಂತೋಷ್ ಬಂಟ್ವಾಳ ಮತ್ತು ವಾರಿಜಾ ಬಂಟ್ವಾಳ, ಸದಾನಂದ ಬಾಳಿಲ ಮತ್ತು ರಮ್ಯ ಎಸ್. ಕಳಂಜ, ಸಚಿನ್‌ರಾಜ್ ಕೊಲ್ಲಮೊಗ್ರು ಮತ್ತು ದಿವ್ಯ ನಾಲ್ಕೂರು, ಪವಿತ್ ಕೋಡಿಂಬಾಳ ಮತ್ತು ಪುಷ್ಪ ಕಲ್ಲುಗುಡ್ಡೆ, ಶ್ರೀಧರ ನಿಡ್ಲೆ ಮತ್ತು ಸುಶೀಲ ನಿಡ್ಲೆ ಮೊದಲಾದ ಒಟ್ಟು ಹತ್ತು ನವ ಜೋಡಿಗಳು ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.