
ಗ್ಯಾರಂಟಿಗಾಗಿ ದಲಿತರ ಮೀಸಲು ನಿಧಿಯಿಂದ 14,488 ಕೋಟಿ ರೂ. ಕನ್ನ: ಎನ್. ರವಿಕುಮಾರ್ ಆರೋಪ
ಉಡುಪಿ: ರಾಜ್ಯ ಸರ್ಕಾರದ ಮುಂದಿನ ಬಜೆಟ್‌ನಲ್ಲಿ ದಲಿತರ ಕಲ್ಯಾಣಕ್ಕೆ ಮೀಸಲಿಡಬೇಕಾದ 14,488 ಕೋಟಿ ರೂ. ದುರ್ಬಳಕೆ ಮಾಡಲು ಹೊಂಚುಹಾಕಿ ಕುಳಿತಿದೆ. ಈಗಾಗಲೇ ಐದು ಗ್ಯಾರೆಂಟಿಗಳಿಗೆ ಸಂಬಂಧಿಸಿದಂತೆ ದಲಿತರ ಮೀಸಲು ನಿಧಿಗೆ ಕನ್ನ ಹಾಕಲು ಪ್ರಸ್ತಾವನೆ ಸಿದ್ಧಪಡಿಸಿದೆ ಎಂದು ವಿಧಾನ ಪರಿಷತ್ ವಿಪಕ್ಷ ಉಪನಾಯಕ ಎನ್. ರವಿಕುಮಾರ್ ಆರೋಪಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರಲ್ಲಿ ಎಸ್‌ಸಿ ವರ್ಗಕ್ಕೆ ಮೀಸಲಿಟ್ಟ 7,713 ಕೋಟಿ ರೂ. ಮತ್ತು ಎಸ್ಟಿ ವರ್ಗಕ್ಕೆ ಮೀಸಲಿಟ್ಟ 3,430 ಕೋಟಿ ರೂ. ಸೇರಿ ಒಟ್ಟು 11,144.00 ಸಾವಿರ ಕೋಟಿ ರೂ.ಗಳನ್ನು ಗ್ಯಾರೆಂಟಿ ಯೋಜನೆಗಳ ಅನುಷ್ಠಾನಕ್ಕೆ ದುರ್ಬಳಕೆ ಮಾಡಿಕೊಂಡಿದೆ. 2024ರಲ್ಲಿ ಎಸ್‌ಸಿ-ಎಸ್ಪಿ ನಿಧಿಯಿಂದ 9,980 ಕೋಟಿ ರೂ. ಮತ್ತು ಟಿಎಸ್ಪಿ ನಿಧಿಯಿಂದ 4,302 ಕೋಟಿ ರೂ. ಸೇರಿ ಒಟ್ಟು 14,282 ಕೋಟಿ ರೂ. ಹಣವನ್ನು ದುರುಪಯೋಗಿಸಿಕೊಂಡಿದೆ ಎಂದರು.
ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ತಾಂಡ ಅಭಿವೃದ್ಧಿ ನಿಗಮ, ಬೋವಿ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಲಿಡ್ಕರ್, ಸಫಾಯಿ ಕರ್ಮಚಾರಿ ಅಭಿವೃದ್ಧಿನಿಗಮ, ಎಸ್‌ಸಿ-ಎಸ್‌ಟಿ, ಅಲೆಮಾರಿ, ಅರೆಅಲೆಮಾರಿ ಅಭಿವೃದ್ಧಿ ನಿಗಮಗಳು ಸರ್ಕಾರದ ಹಣಕಾಸಿನ ನೆರವಿಲ್ಲದೆ ಸೊರಗಿವೆ. ಯಾವ ನಿಗಮದಲ್ಲಿಯೂ ಯಾವ ಯೋಜನೆಯೂ ಜಾರಿಯಾಗುತ್ತಿಲ್ಲ. ಸಾರಿಗೆ ಇಲಾಖೆಯಲ್ಲಿ ಸಂಬಳಕ್ಕೂ ಕಾಸಿಲ್ಲದ ದಿವಾಳಿ ಸ್ಥಿತಿ ಇದೆ. ದಲಿತರ ಹಣಕ್ಕೆ ಕನ್ನ ಹಾಕಿದ ಸಿಎಂ ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಹಣದಲ್ಲಿ ಒಂದು ಪೈಸೆಯನ್ನೂ ಮುಟ್ಟುವುದಿಲ್ಲ ಎಂದರು.
ದಲಿತರ ಬೋರ್‌ವೆಲ್, ಜಮೀನು ಖರೀದಿಗೆ ಬಳಸಬೇಕಾಗಿದ್ದ ಹಣವನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ಎಲ್ಲಾ ಸರ್ಕಾರಗಳು ದಲಿತರ ಕಲ್ಯಾಣಕ್ಕೆ ಬಜೆಟ್‌ನಲ್ಲಿ ಪ್ರತ್ಯೇಕವಾಗಿ ಹಣ ಮೀಸಲಿಟ್ಟು ಖರ್ಚು ಮಾಡುತ್ತಿದ್ದವು. ಆದರೆ, ಸಿದ್ದರಾಮಯ್ಯ 7ಡಿ ಕಾನೂನು ರದ್ದುಗೊಳಿಸಿ ಎಸ್‌ಸಿ ಪಿಟಿ ಹಣ ಅನ್ಯ ಕಾರ್ಯಕ್ಕೆ ಬಳಸಲು ಅನುವು ಮಾಡಿಕೊಟ್ಟಿದ್ದಾರೆ. 2 ವರ್ಷದಲ್ಲಿ 25 ಸಾವಿರ ಕೋಟಿ ಹಣ ದುರುಪಯೋಗವಾಗಿರುವುದು ಹೇಯ ಕೆಲಸ. ಸಿದ್ದರಾಮಯ್ಯ ಸರ್ಕಾರದಿಂದ ದಲಿತರಿಗೆ ಅನ್ಯಾಯವಾಗಿದೆ ಎಂದು ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ ಮತ್ತು ಯಶಪಾಲ್ ಸುವರ್ಣ, ಮಾಜಿ ಶಾಸಕ ಹರ್ಷವರ್ಧನ್ ನಂಜನಗೂಡು, ಮುಖಂಡರಾದ ಸಾಬು ದೊಡ್ಮನಿ, ಗೋಪಾಲ್ ಘಟ್ ಕಾಂಬಳೆ, ಓದೋ ಗಂಗಪ್ಪ, ದಿನಕರ ಬಾಬು, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಮತ್ತು ಮಟ್ಟಾರು ರತ್ನಾಕರ ಹೆಗ್ಡೆ, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರ ಪಂಚವಟಿ ಇದ್ದರು.