
ಭಾರೀ ಸ್ಪೋಟ: ಬೆಚ್ಚಿದ ಜನತೆ
Tuesday, March 4, 2025
ಮಂಗಳೂರು: ಭಾರೀ ಸ್ಫೋಟ ಸಂಭವಿಸಿ ಬಂಟ್ವಾಳ ಸಮೀಪದ ವಿಟ್ಲ ಸುತ್ತಮುತ್ತಲು 3-4 ಕಿ.ಮೀ. ವ್ಯಾಪ್ತಿಯ ಜನತೆ ಬೆಚ್ಚಿ ಬಿದ್ದ ಘಟನೆ ಮಂಗಳವಾರ ವಿಟ್ಲಮುಡ್ನೂರು ಗ್ರಾಮದ ಮಾಡತ್ತಡ್ಕದಲ್ಲಿ ನಡೆದಿದೆ.
ವಿಟ್ಲ ಪೇಟೆ, ವಿಟ್ಲಕಸಬಾ ಗ್ರಾಮ, ವಿಟ್ಲಮುಡ್ನೂರು ಗ್ರಾಮ, ಕಂಬಳಬೆಟ್ಟು, ಮೇಗಿನಪೇಟೆ, ಚಂದಳಿಕೆ ಹಾಗೂ ಸುತ್ತಮುತ್ತಲಿನಲ್ಲಿ ಭಾರೀ ಪ್ರಮಾಣದ ಸದ್ದು ಸಂಭವಿಸಿ, ಆತಂಕದ ಸ್ಥಿತಿ ನಿರ್ಮಾಣವಾಯಿತು.
ಹಲವು ಮಂದಿ ಭೂಕಂಪನ ಸಂಭವಿಸಿರಬಹುದೆಂದು ಊಹಿಸಿದ್ದರು. ಆದರೆ ಮಾಡತ್ತಡ್ಕದಲ್ಲಿರುವ ಕಲ್ಲಿನ ಕೋರೆಯಲ್ಲಿ ಕಲ್ಲು ಸ್ಫೋಟಿಸುವ ಸ್ಫೋಟಕ ಒಮ್ಮೆಲೇ ಸ್ಫೋಟಗೊಂಡಿದೆ.
ಘಟನೆಯ ಪರಿಣಾಮ ಯಾವುದೇ ಪ್ರಾಣ ಹಾನಿ ಹಾಗೂ ಇನ್ನಿತರ ಅನಾಹುತಗಳು ನಡೆದಿಲ್ಲ. ಹತ್ತಿರದ ಹಲವು ಮನೆಗಳ ಗೋಡೆ ಬಿರುಕು ಬಿಟ್ಟಿದೆ. ಮಾಡಿನ ಹಂಚು, ಶೀಟುಗಳು ಪುಡಿಪುಡಿಯಾಗಿ ಬಿದ್ದಿದೆ. ವಿಟ್ಲ ಪೇಟೆಯಲ್ಲಿ ಹಲವು ಮನೆಗಳ ಗ್ಲಾಸ್ ಅಲುಗಾಡಿದ್ದು, ಭಯಭೀತ ವಾತಾವರಣ ಸೃಷ್ಟಿಯಾಗಿತ್ತು.