
ರಸ್ತೆ ಅಪಘಾತ: ಮೂವರ ಸಾವು
ಮಂಜೇಶ್ವರ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಡಿವೈಡರ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ತಂದೆ, ಮಗ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮಂಜೇಶ್ವರದ ಹೊಸಂಗಡಿ ಚೆಕ್ ಪೋಸ್ಟ್ ಬಳಿ ಸೋಮವಾರ ರಾತ್ರಿ ಸಂಭವಿಸಿದೆ.
ಪೈವಳಿಕೆ ಬಾಯಿಕಟ್ಟೆ ನಿವಾಸಿಗಳಾದ ಜನಾರ್ದನ, ಅವರ ಪುತ್ರ ವರುಣ್ ಮತ್ತು ಕಾರು ಚಾಲಕ ಹೊಸಂಗಡಿ ಮೂಡಂಬೈಲು ನಿವಾಸಿ ಕಿಶನ್ ಎಂದು ಮೃತರನ್ನು ಗುರುತಿಸಲಾಗಿದೆ. ಕಾರಿನಲ್ಲಿದ್ದ ಉಪ್ಪಿನಂಗಡಿ ಮೂಲದ ರತನ್ ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರಿಗೆ ತೆರಳುವ ನಿಟ್ಟಿನಲ್ಲಿ ಕಿಶನ್ ಅವರ ಕಾರಿನಲ್ಲಿ ಪೈವಳಿಕೆ ಬಾಯಿಕಟ್ಟೆಯಿಂದ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 66ರ ಹೊಸಂಗಡಿ ಹಳೆ ಚೆಕ್ ಪೋಸ್ಟ್ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿದ್ದು ಹೆದ್ದಾರಿ ಡಿವೈಡರ್ ಮೇಲಿದ್ದ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಸೋಮವಾರ ರಾತ್ರಿ 9.30ರ ಸುಮಾರಿಗೆ ಇದರಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ರಭಸಕ್ಕೆ ಮೂವರು ಸ್ಥಳದಲ್ಲೇ ಕೊನೆಯುಸಿರೆಳದಿದ್ದಾರೆ.