
ತಲವಾರಿನಿಂದ ದಾಳಿ
ಬಂಟ್ವಾಳ: ಮೊಬೈಲ್ ಅಂಗಡಿಗೆ ಬೀಗ ಹಾಕಿ ಮುಚ್ಚುತ್ತಿರುವ ವೇಳೆ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನಿಗೆ ತಲವಾರಿನಿಂದ ದಾಳಿ ನಡೆಸಿದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ನೆಹರುನಗರ ಎಂಬಲ್ಲಿ ಎ.15ರ ಮಂಗಳವಾರ ಮಧ್ಯರಾತ್ರಿ ವೇಳೆ ನಡೆದಿದೆ.
ನೆಹರುನಗರ ನಿವಾಸಿ ತಸ್ಲೀಮ್ ಎಂಬಾತನ ಮೇಲೆ ತಲವಾರು ದಾಳಿ ಆಗಿದ್ದು, ಗಂಭೀರವಾಗಿ ಗಾಯಗೊಂಡ ಈತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಲಾಗಿದೆ.
ತಸ್ಲೀಮ್ ಎಂಬಾತ ಪಾಣೆಮಂಗಳೂರು ನೆಹರು ನಗರದಲ್ಲಿರುವ ಹೈವೆ ಹೋಟೆಲ್ ಪಕ್ಕದಲ್ಲಿ ಮೊಬೈಲ್ ಶಾಪ್ ಹೊಂದಿದ್ದು, ಅಂಗಡಿ ಮುಚ್ಚುವ ವೇಳೆ ಈತನಿಗೆ ತಲವಾರಿನಿಂದ ಕಡಿದಿದ್ದಾರೆ ಎನ್ನಲಾಗಿದೆ.
ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಈತನ ಮೇಲೆ ದಾಳಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈತನ ಸ್ನೇಹಿತ ಮತ್ತು ಇದೇ ಪರಿಸರದ ಹ್ಯಾರೀಶ್ ಎಂಬಾತ ತಲವಾರಿನಿಂದ ಕಡಿದು ಪರಾರಿಯಾಗಿದ್ದಾನೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಮುಂದಾಗಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ, ಎಸ್.ಐ. ರಾಮಕೃಷ್ಣ ಭೇಟಿ ನೀಡಿ ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.