
ಅಪಘಾತ: ಬೆಂಗಳೂರಿನ ಯುವಕ ಸಾವು
ಮಂಗಳೂರು: ಬೆಂಗಳೂರು ಮೂಲದ ಯುವಕನೊಬ್ಬ ಬೈಕಿನಲ್ಲಿ ಕಳೆದ ರಾತ್ರಿ ಪಣಂಬೂರು ಬೀಚ್ ಗೆ ತೆರಳಿ ಹಿಂತಿರುಗುತ್ತಿದ್ದಾಗ ಡಿವೈಡರ್ ಡಿಕ್ಕಿಯಾಗಿದ್ದು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ.
ಬೆಂಗಳೂರು ಮೂಲದ ಶ್ರೀಕಾಂತ್ (24) ಮೃತ ಯುವಕ. ಈತ ಒಂದು ತಿಂಗಳ ಹಿಂದೆ ತನ್ನ ಸಹೋದರಿ ಮಂಗಳೂರಿನ ಬಿಜೈನಲ್ಲಿ ವಾಸವಿರುವ ಮನೆಗೆ ಬಂದು ಉಳಿದುಕೊಂಡಿದ್ದ. ನಿನ್ನೆ ರಾತ್ರಿ ಹತ್ತು ಗಂಟೆ ವೇಳೆಗೆ ಯಮಹಾ ಬೈಕಿನಲ್ಲಿ ಪಣಂಬೂರು ಬೀಚ್ ತೆರಳಿದ್ದು ಅಲ್ಲಿಂದ 12.15ರ ಸುಮಾರಿಗೆ ಹಿಂತಿರುಗಿ ಬರುತ್ತಿದ್ದಾಗ ಅಪಘಾತ ನಡೆದಿದೆ.
ಪಣಂಬೂರು ಸರ್ಕಲ್ ಬಳಿಯ ಡಿಕ್ಸ್ ಶಿಪ್ಪಿಂಗ್ ಕಂಪನಿಯ ಕಚೇರಿ ಮುಂದುಗಡೆ ಶ್ರೀಕಾಂತ್ ಚಲಾಯಿಸುತ್ತಿದ್ದ ಬೈಕ್ ಡಿವೈಡರ್ ಬದಿಗೆ ಡಿಕ್ಕಿಯಾಗಿದ್ದು 20 ಮೀಟರ್ ಉದ್ದಕ್ಕೆ ತಳ್ಳಿಕೊಂಡು ಹೋಗಿದೆ. ಈ ವೇಳೆ, ಶ್ರೀಕಾಂತ್ ರಸ್ತೆಗೆ ಬಿದ್ದು ತೀವ್ರ ಗಾಯಗೊಂಡಿದ್ದಾರೆ. ಸ್ಥಳದಲ್ಲಿದ್ದವರು ಕೆಲಹೊತ್ತಿನಲ್ಲಿ ಅವರನ್ನು ಎಜೆ ಆಸ್ಪತ್ರೆಗೆ ದಾಖಲಿಸಿದ್ದು ಅಷ್ಟರಲ್ಲಿ ಮೃತಪಟ್ಟಿದ್ದಾರೆ. ಸುರತ್ಕಲ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.