
ಫ್ಲೈಓವರ್‌ಗಳ ಧಾರಣಾ ಸಾಮಥ್ಯ೯ ಪರಿಶೀಲನೆ
ಬಂಟ್ವಾಳ: ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯು ಭರದಿಂದ ಸಾಗುತ್ತಿದ್ದು,ಕಲ್ಲಡ್ಕ ಫ್ಲೈಓವರ್ ಮುಂದಿನ ತಿಂಗಳು ಸಂಚಾರಕ್ಕೆ ತೆರವುಗೊಳ್ಳುವ ನಿರೀಕ್ಷೆ ಇದ್ದು, ಇದರ ಭಾಗವಾಗಿ ಧಾರಣಾ ಸಾಮರ್ಥ್ಯವನ್ನು ಪರಿಶೀಲಿಸುವ ಕಾರ್ಯ ನಡೆಯುತ್ತಿದೆ.
ಬಿ.ಸಿ.ರೋಡು-ಅಡ್ಡಹೊಳೆ ರಸ್ತೆಯ ಹಲವು ಕಡೆ ನೂತನ ಸೇತುವೆಗಳು, ಎಲಿವೇಟೆಡ್ ರೋಡ್(ಓವರ್‌ಪಾಸ್), ಕಲ್ಲಡ್ಕದಲ್ಲಿ ಫ್ಲೈಓವರ್ ನಿರ್ಮಿಸಲಾಗಿದ್ದು, ಅದರ ಧಾರಣಾ ಸಾಮರ್ಥ್ಯ(ಲೋಡ್ ಟೆಸ್ಟ್ ಫಾರ್ ಬ್ರಿಡ್ಜ್)ದ ಪ್ರಮಾಣ ಪತ್ರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ)ಕ್ಕೆ ಸಲ್ಲಿಸುವ ಹಿನ್ನೆಲೆಯಲ್ಲಿ ಧಾರಣಾ ಸಾಮರ್ಥ್ಯವನ್ನು ಪರಿಶೀಲಿಸಲಾಗುತ್ತಿದೆ.
ಪಾಣೆಮಂಗಳೂರು, ಉಪ್ಪಿನಂಗಡಿಯಲ್ಲಿ ನದಿಗೆ ದೊಡ್ಡ ಸೇತುವೆಗಳು, ಉಳಿದಂತೆ ಸಣ್ಣಪುಟ್ಟ ಸೇತುವೆಗಳು, ಕಲ್ಲಡ್ಕದಲ್ಲಿ ಫ್ಲೈವರ್, ಪಾಣೆಮಂಗಳೂರು, ಮೆಲ್ಕಾರ್, ಮಾಣಿ, ನೆಕ್ಕಿಲಾಡಿ, ಉಪ್ಪಿನಂಗಡಿ, ಸುಬ್ರಹ್ಮಣ್ಯ ಕ್ರಾಸ್ ಹಾಗೂ ನೆಲ್ಯಾಡಿಯಲ್ಲಿ ಎಲಿವೇಟೆಡ್ ರಸ್ತೆಗಳನ್ನು ನಿರ್ಮಿಸಲಾಗಿದ್ದು, ಈ ಎಲ್ಲಾ ನಿರ್ಮಾಣಗಳು ಎಷ್ಟು ಭಾರವನ್ನು ಹೊರುತ್ತವೆ ಎಂದು ಖಚಿತಪಡಿಸಿಕೊಳ್ಳಬೇಕಾಗಿರುವ ಹಿನ್ನಲೆಯಲ್ಲಿ ಸದ್ಯಕ್ಕೆ ಕಾಮಗಾರಿ ಪೂರ್ಣಗೊಂಡ ಭಾಗಗಳಲ್ಲಿ ಧಾರಣಾ ಸಾಮರ್ಥ್ಯ ಪರಿಶೀಲಿಸಲಾಗುತ್ತಿದೆ.
ಈ ನಿರ್ಮಾಣಗಳು ಮುಂದೆ ಪೂರ್ಣ ಪ್ರಮಾಣದಲ್ಲಿ ಸಂಚಾರಕ್ಕೆ ತೆರೆದುಕೊಂಡ ಬಳಿಕ ಹೆದ್ದಾರಿಯಲ್ಲಿ ಯಾವುದೇ ವಾಹನಗಳು ಸಂಚರಿಸಿದರೂ ಅದರ ಭಾರವನ್ನು ರಸ್ತೆ ಹೊರಬೇಕಿದೆ. ಈ ದೃಷ್ಟಿಯಿಂದ ಹೆದ್ದಾರಿ ಕಾಮಗಾರಿ ಗುತ್ತಿಗೆ ನಿರ್ವಹಿಸುವ ಕಂಪೆನಿ ಕೆಎನ್‌ಆರ್ ಕನ್‌ಸ್ಟ್ರಕ್ಷನ್‌ನವರು ತಮ್ಮ ಬೃಹತ್ ಗಾತ್ರ 4 ಲಾರಿಗಳನ್ನು ಪೂರ್ತಿ ಲೋಡ್ ಮಾಡಿ ಸೇತುವೆಯಲ್ಲಿ ನಿಲ್ಲಿಸಿ ಧಾರಣಾ ಸಾಮರ್ಥ್ಯವನ್ನು ಪರಿಶೀಲಿಸಲಾಗುತ್ತದೆ. ಕಂಪೆನಿಯ ಮಾಹಿತಿ ಪ್ರಕಾರ ಅವುಗಳು 2 ಸಾವಿರ ಟನ್ ಭಾರವನ್ನು ಹೊರಬೇಕಿದೆ.
ಪ್ರಸ್ತುತ ಧಾರಣಾ ಸಾಮರ್ಥ್ಯವನ್ನು ಪರಿಶೀಲಿಸುವ ಕಾರ್ಯ ನಡೆಯುತ್ತಿದ್ದು, ಎನ್‌ಎಚ್‌ಎಐನ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಅಜ್ಮಿ ಅವರು ಕೆಎನ್‌ಆರ್ ಕಂಪೆನಿಯ ಪ್ರಾಜೆಕ್ಟ್ ಮ್ಯಾನೇಜರ್ ಮಹೇಂದರ್ ರೆಡ್ಡಿ ಸೇರಿದಂತೆ ಪ್ರಾಽಕಾರ ಹಾಗೂ ಕಂಪೆನಿಯ ಅಧಿಕಾರಿಗಳ ಜತೆ ಪರಿಶೀಲನೆಯನ್ನು ನಡೆಸಿದ್ದಾರೆ.
ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿಯಿಂದ ಮಳೆಗಾಲದಲ್ಲಿ ಅಗಬಹುದಾದ ಸಮಸ್ಯೆಗಳ ಬಗ್ಗೆಯು ಕಳೆದವಾರ ಬಂಟ್ವಾಳ ತಹಶೀಲ್ದಾರರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗುತ್ತಿಗೆ ಸಂಸ್ಥೆಯ ಪ್ರತಿನಿಧಿಯನ್ನು ಕರೆಸಿ ಚರ್ಚಿಸಲಾಗಿದೆ.
ಕಲ್ಲಡ್ಕ ಫ್ಲೈಓವರ್ ನಲ್ಲಿ ರಸ್ತೆಗೆ ನೀರು ಹೊರಚೆಲ್ಲದಂತೆ ಗಮನಹರಿಸಬೇಕು. ಕಾಮಗಾರಿ ಆಗುವ ಜಾಗದಲ್ಲಿ ಜನರಿಗೆ ತೊಂದರೆ ಆಗದಂತೆ, ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಸೂಚಿಸಲಾಗಿದೆ.
ಆರು ತಿಂಗಳೊಳಗೆ ಹೆದ್ದಾರಿ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಕಲ್ಲಡ್ಕ ಫ್ಲೈಓವರ್ ಮುಂದಿನ ತಿಂಗಳು ವಾಹನ ಸಂಚಾರಕ್ಕೆ ತೆರವುಗೊಳಿಸುವ ದೆಸೆಯಲ್ಲಿ ಪ್ರಯತ್ನಗಳು ಸಾಗುತ್ತಿದೆ.