
ಏ.9 ರಂದು ಕಾಂಗ್ರೆಸ್ಸಿನ ದುರಾಡಳಿತದ ವಿರುದ್ಧ ದ.ಕ ಜಿಲ್ಲೆಯಲ್ಲಿ ಜನಾಕ್ರೋಶ ಯಾತ್ರೆ: ಶಾಸಕ ಕಾಮತ್
ಮಂಗಳೂರು: ರಾಜ್ಯದಲ್ಲಿ ಕಳೆದ 20 ತಿಂಗಳಿನಿಂದಲೂ ನಿರಂತರ ಬೆಲೆ ಏರಿಕೆ, ದಲಿತರ ಹಣ ಲೂಟಿ, ಹಿಂದೂ ವಿರೋಧಿ ನೀತಿ, ಮುಸ್ಲಿಂ ಓಲೈಕೆ, ರೈತರ ನಿರ್ಲಕ್ಷ್ಯ ಹೀಗೆ ಸಾಲು ಸಾಲು ವೈಫಲ್ಯಕ್ಕೀಡಾಗಿರುವ ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ವಿರೋಧಿಸಿ ಏ.9 ರಂದು ಮಂಗಳೂರಿನಲ್ಲಿ ಜನಾಕ್ರೋಶ ಯಾತ್ರೆ ನಡೆಯಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.
ಅವರು ಇಂದು ತಮ್ಮ ಕಚೇರಿ ಅಟಲ್ ಸೇವಾ ಕೇಂದ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಏ.9 ರಂದು ಸಂಜೆ 3 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಕ್ಲಾಕ್ ಟವರ್ ತನಕ ಯಾತ್ರೆ ಸಾಗಿ ಅಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಯಾತ್ರೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಆರ್. ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ಅಶ್ವಥ್ ನಾರಾಯಣ್, ಸಿ.ಟಿ. ರವಿ, ನಳಿನ್ ಕುಮಾರ್ ಕಟೀಲ್, ಬ್ರಿಜೇಶ್ ಚೌಟ, ಸಹಿತ ಅನೇಕ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ ಅವರು ಯಾತ್ರೆಯಲ್ಲಿ 15 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಕಾಂಗ್ರೆಸ್ ಆಡಳಿತದಿಂದ ಇಡೀ ರಾಜ್ಯದ ಜನತೆ ಬೇಸತ್ತಿದ್ದು, ಅಂತಹ ಜನ ವಿರೋಧಿ ಆಡಳಿತ ನೀಡುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವತಿಯಿಂದ ಇಂದಿನಿಂದ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆಯು ಆರಂಭಗೊಂಡಿದ್ದು ಏ.9 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಬರಲಿದ್ದು, ಏ.10 ರಂದು ಉಡುಪಿಯಲ್ಲಿ ಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
ನಾಡಿನ ಜನತೆಗೆ ಕಾಂಗ್ರೆಸ್ ಸರ್ಕಾರದಲ್ಲಿ ನಿಯಂತ್ರಣವಿಲ್ಲದ ಬೆಲೆಯೇರಿಕೆಯಿಂದಾಗಿ ಜನರಿಗಾಗುತ್ತಿರುವ ಅನ್ಯಾಯ, ಹದಗೆಟ್ಟ ಕಾನೂನು ಸುವ್ಯವಸ್ಥೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಮಿತಿಮೀರಿದ ತುಷ್ಟಿಕರಣ, ಹೀಗೆ ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯ ಹಿಂದೆಂದೂ ಕಂಡಿರದಂತಹ ದುರಾಡಳಿತವನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. ಒಂದು ಅಸಮರ್ಥ ಸರ್ಕಾರದ ವಿರುದ್ಧ ಜನರು ಆಕ್ರೋಶಗೊಳ್ಳಲು ಇದಕ್ಕಿಂತ ಇನ್ನೇನು ಬೇಕು? ಎಂದು ಪ್ರಶ್ನಿಸಿದರು.
ಆ ನಿಟ್ಟಿನಲ್ಲಿ ಇದೀಗ ಜನತೆಯ ನೋವಿಗೆ ಧ್ವನಿಯಾಗಿ ಬಿಜೆಪಿ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದ್ದು ಬೆಲೆಯೇರಿಕೆಯಿಂದಾಗಿ ತೊಂದರೆ ಅನುಭವಿಸುತ್ತಿರುವ ಎಲ್ಲಾ ವರ್ಗದವರು, ದಲಿತ ಬಂಧುಗಳು, ಬಿಜೆಪಿಯ ಎಲ್ಲಾ ಕಾರ್ಯಕರ್ತರ ಸಹಿತ ಸಾರ್ವಜನಿಕರೆಲ್ಲರೂ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠವನ್ನು ಕಲಿಸಲು ಸಹಕರಿಸುವಂತೆ ಶಾಸಕರು ವಿನಂತಿಸಿದರು.
ಪೂರ್ಣಿಮಾ, ರಮೇಶ್ ಹೆಗ್ಡೆ, ಕಿರಣ್ ರೈ, ಜಯಲಕ್ಷ್ಮಿ ಶೆಟ್ಟಿ, ಉಪಸ್ಥಿತರಿದ್ದರು.