
ಆರೋಗ್ಯಕರ ಜೀವನಶೈಲಿಯಿಂದ ನೆಮ್ಮದಿಯ ಬದುಕು: ಸಿಎ ಶಾಂತಾರಾಮ ಶೆಟ್ಟಿ
ರೆಡ್‌ಕ್ರಾಸ್ ಸೊಸೈಟಿಯಿಂದ ವಿಶ್ವ ಆರೋಗ್ಯ ದಿನಾಚರಣೆ
ಮಂಗಳೂರು: ಮನುಷ್ಯನಿಗೆ ಬದುಕಿನಲ್ಲಿ ಆರೋಗ್ಯ ಎಲ್ಲಕ್ಕಿಂತಲೂ ಮುಖ್ಯ. ಯುವ ಸಮುದಾಯ ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಮಾತ್ರ ನೆಮ್ಮದಿಯ ಬದುಕು ಸಾಧ್ಯ ಎಂದು ರೆಡ್‌ಕ್ರಾಸ್ ದ.ಕ. ಜಿಲ್ಲಾ ಸಮಿತಿಯ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.
ಅವರು ಇಂದು ನಗರದ ವಿ.ವಿ. ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕ, ಯೂತ್ ರೆಡ್‌ಕ್ರಾಸ್ ಘಟಕ ಮಂಗಳೂರು ವಿ.ವಿ., ಯನೆಪೋಯ ಪರಿಗಣಿತ ವಿ.ವಿ. ಮತ್ತು ವಿ.ವಿ. ಕಾಲೇಜು ವತಿಯಿಂದ ವಿಶ್ವ ಆರೋಗ್ಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿ.ವಿ. ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಮಾತನಾಡಿ, ಆರೋಗ್ಯ ಕಾಪಾಡಲು ಉತ್ತಮ ಆಹಾರ ಪದ್ದತಿ ಅನುಸರಿಸುವುದು ಅಗತ್ಯ ಎಂದರು.
ರೆಡ್‌ಕ್ರಾಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಕಿಶೋರ್ ಚಂದ್ರ ಹೆಗ್ಡೆ, ನಿರ್ದೇಶಕರುಗಳಾದ ಪಿ.ಬಿ. ಹರೀಶ್ ರೈ, ಗುರುದತ್ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯೇನೆಪೊಯ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಶ್ವೇತಾ ಪ್ರಭು ಮತ್ತು ಪ್ರತೀಕ್ಷಾ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಮಂಗಳೂರು ವಿ.ವಿ.ಯ ಯೂತ್ ರೆಡ್‌ಕ್ರಾಸ್ ನೋಡಲ್ ಅಧಿಕಾರಿ ಡಾ. ಗಾಯತ್ರಿ ಎನ್. ಸ್ವಾಗತಿಸಿ, ಯೇನೆಪೊಯ ವಿ.ವಿ.ಯ ಯೂತ್ ರೆಡ್‌ಕ್ರಾಸ್ ನೋಡಲ್ ಅಧಿಕಾರಿ ನಿತ್ಯಶ್ರೀ ಬಿ.ವಿ. ವಂದಿಸಿದರು. ವಿ.ವಿ. ಕಾಲೇಜಿನ ರೆಡ್‌ಕ್ರಾಸ್ ಸಂಯೋಜನಾಧಿಕಾರಿ ಭಾರತಿ ಪಿಲಾರ್ ಕಾರ್ಯಕ್ರಮ ನಿರೂಪಿಸಿದರು.
ಬಹುಮಾನ ವಿಜೇತರು:
ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಏರ್ಪಡಿಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ತೃಷಾ ಕಾಲೇಜು ತಂಡ ಪ್ರಥಮ, ಯೇನೆಪೋಯ ವಿ.ವಿ. ದ್ವಿತೀಯ ಹಾಗೂ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ತಂಡ ತೃತೀಯ ಸ್ಥಾನ ಗಳಿಸಿದವು. ಪೋಸ್ಟರ್ ತಯಾರಿ ಸ್ಪರ್ಧೆಯಲ್ಲಿ ಯೇನೆಪೋಯ ವಿ.ವಿ.ಯ ಹಿಬಾ ಪ್ರಥಮ, ಸುಲ್ತಾನ ದ್ವಿತೀಯ ಹಾಗೂ ಮುಸ್ತಾಫ ತೃತೀಯ ಬಹುಮಾನ ಪಡೆದರು.
ಸಮಾರೋಪ ಸಮಾರಂಭದಲ್ಲಿ ರೆಡ್‌ಕ್ರಾಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಸತೀಶ್ ರಾವ್, ಆರೋಗ್ಯ ಮತ್ತು ಪ್ರಥಮ ಚಿಕಿತ್ಸೆ ಉಪಸಮಿತಿಯ ಚೇರ್ಮನ್ ಡಾ.ಸಚ್ಚಿದಾನಂದ ರೈ ಬಹುಮಾನ ವಿತರಿಸಿದರು.