
ಇನ್ನೆರೆಡು ತಿಂಗಳಲ್ಲಿ ಐಟಿ ಪಾರ್ಕ್: ಶರತ್ ಬಚ್ಚೇಗೌಡ
ಮಂಗಳೂರು: ಜಾಗತಿಕ ಸಾಮರ್ಥ್ಯ ಕೇಂದ್ರ(ಜಿಸಿಸಿ)ಗಳನ್ನು ಮಂಗಳೂರಿನಲ್ಲೂ ಉತ್ತೇಜಿಸುವ ಉದ್ದೇಶದಿಂದ ನಗರದ ಬ್ಲೂಬೆರಿ ಹಿಲ್ಸ್‌ನಲ್ಲಿರುವ ಕಿಯೋನಿಕ್ಸ್‌ನ 3.5 ಎಕ್ರೆ ಜಾಗದಲ್ಲಿ ಮಂಗಳೂರು ಐಟಿ ಪಾರ್ಕ್ ನಿರ್ಮಿಸಲಾಗುವುದು, ಇದರ ನಿರ್ಮಾಣಕಾರ್ಯಕ್ಕೆ ಇನ್ನೆರಡು ತಿಂಗಳಲ್ಲೇ ಚಾಲನೆ ನೀಡಲಾಗುವುದು ಎಂದು ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ತಿಳಿಸಿದ್ದಾರೆ.
ನಗರದ ವರ್ಟೆಕ್ಸ್ ವರ್ಕ್‌ಸ್ಪೇಸ್ ವತಿಯಿಂದ ಕದ್ರಿಯ ವರ್ಟೆಕ್ಸ್ ಫೈವ್‌ನಲ್ಲಿ ಶುಕ್ರವಾರ ಹಮ್ಮಿಕೊಂಡ ಟೆಕ್ವೇವ್ಸ್: ರೈಸ್ ಆಫ್ ದಿ ಸಿಲಿಕಾನ್ ಬೀಚ್ ಆಫ್ ಇಂಡಿಯಾ’ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದರು.
ಬ್ಲೂಬೆರಿ ಹಿಲ್ಸ್ ಮಂಗಳೂರಿನ ಅತಿ ಸುಂದರ ಹಾಗೂ ಐಟಿ ಪಾರ್ಕ್ ನಿರ್ಮಾಣಕ್ಕೆ ಯೋಗ್ಯವಾದ ಪ್ರದೇಶ. ಇಲ್ಲಿ ಸುಮಾರು ೪ ಲಕ್ಷ ಚದರಡಿಯಿಂದ 10 ಲಕ್ಷ ಚದರಡಿ ವರೆಗೂ ವಿಸ್ತರಿಸಬಹುದಾದ ಐಟಿ ಪಾರ್ಕ್ ನಿರ್ಮಿಸಲಾಗುವುದು. ಈ ಮಾಸಾಂತ್ಯ ಟೆಂಡರ್ ಕರೆದು ಜೂನ್ ವೇಳೆಗೆ ಭೂಮಿ ಪೂಜೆ ನೆರವೇರಿಸಿ, ಎರಡೂವರೆ ವರ್ಷದೊಳಗೆ ಪಾರ್ಕ್ ಕಾರ್ಯಾಚರಣೆ ಆರಂಭಿಸಬೇಕು ಎನ್ನುವ ಯೋಚನೆ ಇದೆ ಎಂದರು.
ಮಂಗಳೂರಿನಲ್ಲೂ ಜಾಗತಿಕ ಸಾಮರ್ಥ್ಯ ಕೇಂದ್ರಗಳು ತಲೆ ಎತ್ತುತ್ತಿವೆ. ಐಟಿ ಪಾರ್ಕ್ನಲ್ಲಿ ದೊಡ್ಡ ಜಿಸಿಸಿಗಳ ಬದಲು 30-40ರಷ್ಟು ಅತಿ ಸಣ್ಣ ಹಾಗೂ ಕಿರು ಗಾತ್ರದ ಜಿಸಿಸಿಗಳಿಗೇ ಆದ್ಯತೆ ನೀಡುವ ಮೂಲಕ ಮಂಗಳೂರಿನ ಪೂರ್ಣ ಪ್ರತಿಭೆಗಳಿಗೆ ಅವಕಾಶ ನೀಡಲಾಗುವುದು. ಈ ಮೂಲಕ ಬೆಂಗಳೂರು ಬಳಿಕ ಮಂಗಳೂರಿನಲ್ಲಿ ಎರಡನೇ ಎಲೆಕ್ಟ್ರಾನಿಕ್ ಸಿಟಿಯನ್ನಾಗಿ ಹೊರಹೊಮ್ಮಿಸುವ ಉದ್ದೇಶವಿದೆ ಎಂದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮಾತನಾಡಿ, ಮಂಗಳೂರಿಗೆ ಮಾಹಿತಿ ತಂತ್ರಜ್ಞಾನದಲ್ಲಿ ಉಜ್ವಲ ಭವಿಷ್ಯವಿದೆ, ಇಲ್ಲಿಗೆ ದೊಡ್ಡ ಕೈಗಾರಿಕೆಗಳು ಬರುತ್ತವೆ ಎಂದು ನಿರೀಕ್ಷಿಸುವುದಕ್ಕಿಂತಲೂ ಇಲ್ಲಿನ ಯುವಕರು, ನವೋದ್ಯಮಿಗಳು ಜಾಗತಿಕ ಮಟ್ಟಕ್ಕೆ ಬೆಳೆದು ತೋರಿಸುವುದು ಉತ್ತಮ ಎಂದು ಹೇಳಿದರು.
ಮಂಗಳೂರಿಗೆ ಕೊಡುಗೆ ನೀಡುತ್ತಿರುವ ಉದ್ಯಮಿಗಳಾದ ಕೋಕಿ ಕಾಟೊ (ಕೊಬಯಾಶಿ ಕ್ರಿಯೇಟ್ ಇಂಡಿಯಾ), ತಕಾಶಿ ಮಿಯಾಸಾಕಾ (ನಿಡೆಕ್ ಅಡ್ವಾನ್ಸ್ ಟೆಕ್ನಾಲಜಿ), ಜಗತ್ ಬಿದ್ದಪ್ಪ ಮತ್ತು ನವಜಿತ್ ಕರ್ಕೇರಾ (ಸೋನಿಕ್ ಲ್ಯಾಂಬ್) ಮತ್ತು ಯೂನಿಫೆಸಿಎಕ್ಸ್ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನ ಮುಖಂಡರನ್ನು ಗುರುತಿಸಿ ಗೌರವಿಸಲಾಯಿತು.