
ಪೋಪ್ ಫ್ರಾನ್ಸಿಸ್ ನಿಧನ ಡಿವೈಎಫ್ಐ ಕಂಬನಿ
ಮಂಗಳೂರು: ರೋಮನ್ ಕ್ಯಾಥೋಲಿಕರ ಪ್ರಧಾನ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ನಿಧನ ಜಾಗತಿಕ ನಷ್ಟ ಎಂದು ಡಿವೈಎಫ್ಐ ಕಂಬನಿ ಮಿಡಿದಿದೆ.
ಅಮೇರಿಕಾದ ತೀವ್ರವಾದಿ ಬಲಪಂಥೀಯ ಪಕ್ಷಗಳು ವ್ಯಾಟಿಕನ್ನಿನ ಕಮ್ಯುನಿಸ್ಟ್ ಎಂದು ಪೋಪ್ ಫ್ರಾನ್ಸಿಸರನ್ನು ಟೀಕಿಸಿ ಕರೆದಾಗ ನಾನು ಕಮ್ಯುನಿಸ್ಟನಲ್ಲ ಆದರೆ ಕಮ್ಯುನಿಸ್ಟರು ಹೇಳುವುದು ಸತ್ಯವಾಗಿದ್ದರೆ ನಾನು ಅವರನ್ನು ಸಮರ್ಥಿಸುತ್ತೇನೆ ಮತ್ತು ಅವರ ಸತ್ಯದ ಪರವಾಗಿ ನಿಲ್ಲುತ್ತೇನೆ ಎಂದು ಹೇಳಿದವರು ಪೋಪ್ ಫ್ರಾನ್ಸಿಸ್ ಅವರು ಘಾಝದಲ್ಲಿ ಬಾಂಬ್ ದಾಳಿಗಳನ್ನು ನಿಲ್ಲಿಸಬೇಕೆಂದು ಕರೆ ನೀಡುತ್ತಾ ನನ್ನ ಮನಸ್ಸು ಸಂಕಷ್ಟದಲ್ಲಿರುವ ಇಸ್ರೇಲ್ ಮತ್ತು ಪೆಲೆಸ್ತೀನಿನ ಜನರೊಂದಿಗೆ ಸಮ್ಮಿಳಿತಗೊಂಡಿದೆ ಎಂದು ಈಸ್ಟರ್ ದಿನ ಜಗತ್ತಿಗೆ ಸಾರಿ ಹೇಳಿದ ಪೋಪ್ ಫ್ರಾನ್ಸಿಸ್ ಜಗತ್ತಿಗೆ ವಿದಾಯ ಹೇಳುವಾಗ ಸಹನೆ, ಉದಾರತೆ ಮತ್ತು ಮಾನವೀಯತೆಯ ಮಹಾ ಸಾಗರವನ್ನೇ ಸೃಷ್ಟಿಸಿ ಮಾನವ ಸಮುದಾಯಕ್ಕೆ ಕಾರುಣ್ಯದ ಬೆಳಕನ್ನು ಹರಿಸಿ ಹೋಗಿದ್ದಾರೆ.
ಪೋಪ್ ಅವರಿಗೆ ಬದುಕಲು ಸಕಲ ಐಶ್ವರ್ಯ ಇದ್ದಾಗಲೂ ಆಡಂಬರದ ಐಷಾರಾಮಿ ವಾಹನಗಳನ್ನು ತ್ಯಜಿಸಿ ತನ್ನ ಆಹಾರವನ್ನು ತಾನೇ ಮಾಡಿಕೊಂಡು ಸರಳತೆಯನ್ನು ಪ್ರತಿಪಾದಿಸಿ ಕಷ್ಟದಲ್ಲಿರುವ, ಹಸಿವಿನಲ್ಲಿರುವವರಿಗೆ ನೆರವಾಗಲು ಆಹ್ವಾನ ನೀಡಿದ ಶ್ರೇಷ್ಠ ಸಂತರಾಗಿದ್ದರು. ಸದಾ ಸತ್ಯದ ಹುಡುಕಾಡುತ್ತಾ ಸತ್ಯದ ಪರ ಧೃಢವಾಗಿ ನಿಲ್ಲುತ್ತಿದ್ದ ಪೋಪ್ ಫ್ರಾನ್ಸಿಸ್ ಬಗ್ಗೆ ಹೇಳಲು ಬಹಳಷ್ಟಿದೆ ಬಡವರ ಕೇರಿಗಳಿಗೆ ಭೇಟಿ ನೀಡಿ ವಸತಿ ಇಲ್ಲದ ಬಡವರ ಬಗ್ಗೆ ಮರುಗುತ್ತಲೇ ಕಾರ್ಮಿಕರನ್ನು ಶೋಷಣೆ ಮಾಡುವ ಧನಿಕರನ್ನು, ಮಕ್ಕಳ ಪೀಡಿನೆಯನ್ನು ವಿರೋಧಿಸುತ್ತಿದ್ದರು.
ಸಹನೆಯ ಸಾಕಾರ ಮೂರ್ತಿಯಾಗಿದ್ದು ಜಗತ್ತಿನ ಶಾಂತಿಯನ್ನು ಬಯಸುತ್ತಾ ಸರ್ವ ಮಾನವರ ಒಳಿತನ್ನು ಬಯಸಿದ ಶ್ರೇಷ್ಠ ಸಂತ ಪೋಪ್ ಫ್ರಾನ್ಸಿಸ್ ಅವರಿಗೆ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಭಾವ ಪೂರ್ಣ ಶ್ರದ್ದಾಂಜಲಿ ಅರ್ಪಿಸುತ್ತದೆ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಮತ್ತು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.