.jpeg)
ಜನಿವಾರ ಪ್ರಕರಣ: ಸಿದ್ದರಾಮಯ್ಯ ಸರ್ಕಾರದಿಂದ ಮುಂದುವರೆದ ಹಿಂದೂ ವಿರೋಧಿ ಮಾನಸಿಕತೆ: ಶಾಸಕ ಕಾಮತ್
ಮಂಗಳೂರು: ರಾಜ್ಯದಲ್ಲಿ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಂದ ಬಲವಂತವಾಗಿ ಜನಿವಾರ ತೆಗೆಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದು ಮಾತ್ರವಲ್ಲದೇ ಜನಿವಾರ ತೆಗೆಯಲೊಪ್ಪದ ವಿದ್ಯಾರ್ಥಿಯನ್ನು ಪರೀಕ್ಷೆಗೆ ಹಾಜರಾಗಲು ಬಿಡದೇ ಅವರ ಭವಿಷ್ಯವನ್ನ ಹಾಳು ಮಾಡಲಾಗಿರುವುದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮುಂದುವರಿದ ಹಿಂದೂ ವಿರೋಧಿ ಮಾನಸಿಕತೆಯಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಜನಿವಾರ ತೊಡುವುದು ಭಾರತೀಯ ಸಮುದಾಯದ ಆಚಾರ ವಿಚಾರಕ್ಕೆ ಸಂಬಂಧಿಸಿದ್ದು. ಯಾವುದೇ ಒಬ್ಬ ವ್ಯಕ್ತಿ ಬಾಲ್ಯಾವಸ್ಥೆಯನ್ನು ಕಳೆದು ಪ್ರೌಢಾವಸ್ಥೆಗೆ ಕಾಲಿಡುವ ಸಂದರ್ಭದಲ್ಲಿ ಮುಂದೆ ಹೇಗೆ ಸಂಸ್ಕಾರಯುತವಾಗಿ ಬದುಕಬೇಕು ಎಂಬುದನ್ನು ತಿಳಿದುಕೊಂಡು, ಪವಿತ್ರ ಮಂತ್ರವನ್ನು ಉಚ್ಚರಿಸಿ ಪಡೆಯುವ ದೀಕ್ಷೆಯ ರೂಪವೇ ಜನಿವಾರ. ಅಂತಹ ಪವಿತ್ರ ಜನಿವಾರವನ್ನು ಕಟ್ ಮಾಡಿ ಕಸದ ಬುಟ್ಟಿಗೆ ಎಸೆಯುವುದು, ಇದರಲ್ಲಿ ನೀನು ನೇಣು ಹಾಕಿಕೊಳ್ಳಬಹುದು ಎಂದು ಅಪಹಾಸ್ಯ ಮಾಡುವುದನ್ನೆಲ್ಲಾ ಹೇಗೆ ತಾನೇ ಸಹಿಸಲು ಸಾಧ್ಯ?. ಸ್ವತಃ ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ ಜನಿವಾರ ತೆಗೆಯಬೇಕೆಂಬ ನಿಯಮ ಎಲ್ಲೂ ಇಲ್ಲ ಎಂದು ಸ್ಪಷ್ಟಪಡಿಸಿದೆ. ಜನಿವಾರ ಹಾಕಲಿಕ್ಕೂ, ತೆಗಿಯಲಿಕ್ಕೂ ಅದರದ್ದೇ ಆದ ನಿಯಮವಿದೆ ಎಂಬುದು ಈ ಮತಿಹೀನ ಸರ್ಕಾರಕ್ಕೆ ಅರಿವಿಲ್ಲವಾಯಿತೇ? ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಈ ದೇಶದ ಸಂಸ್ಕೃತಿ, ಸನಾತನ ಹಿಂದೂ ಧರ್ಮದ ಆಚಾರ ವಿಚಾರವನ್ನು ಅರಿಯದೇ ಇರುವವರು ಆಡಳಿತ ವ್ಯವಸ್ಥೆಯಲ್ಲಿದ್ದರೆ ಏನಾಗಲಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಬ್ರಾಹ್ಮಣರು ಮಾತ್ರ ಯಜ್ಞೋಪವೀತ ಜನಿವಾರ ಹಾಕುವುದಲ್ಲ. ಸಾರಸ್ವತ ಸಮುದಾಯದವರು, ರಾಮಕ್ಷತ್ರಿಯರು, ವಿಶ್ವಕರ್ಮ ಸಮಾಜದವರು, ಅಷ್ಟೇ ಅಲ್ಲ, ಪೂಜಾ ಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಬಿಲ್ಲವ ಸಮುದಾಯ ಸೇರಿದಂತೆ ಅನೇಕರು ಜನಿವಾರವನ್ನು ಧರಿಸುತ್ತಾರೆ. ಇದೀಗ ಈ ಅನ್ಯಾಯದ ವಿರುದ್ಧ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆದ ಮೇಲೆ ಕಾಂಗ್ರೆಸ್ ಸರ್ಕಾರ ಹೆದರಿದ್ದು ಅಷ್ಟರ ಮಟ್ಟಿಗೆ ಸಂಘಟಿತರಾದ ಹಿಂದೂ ಸಮಾಜಕ್ಕೆ ಕೋಟಿ ಕೋಟಿ ಧನ್ಯವಾದಗಳು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೂಡಲೇ ರಾಜ್ಯದ ಜನತೆಯ ಕ್ಷಮೆ ಕೇಳಿ, ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗೆ ನ್ಯಾಯ ದೊರಕಿಸಿಕೊಟ್ಟು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈ ಗೊಂಡು ಇನ್ನು ಮುಂದೆ ಹೀಗಾಗದಂತೆ ಎಚ್ಚರ ವಹಿಸಬೇಕೆಂದು ಶಾಸಕ ಕಾಮತ್ ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.