
ಶಿಕ್ಷಣ ಸಮಾಜಕ್ಕೆ ಅನುಕೂಲಕರವಾಗಿರಬೇಕು: ರಘುವೀರ್
Tuesday, April 15, 2025
ಮಂಗಳೂರು: ಬಾಬಾ ಸಾಹೇಬ್ ಅಂಬೇಡ್ಕರ್ ಯುವಜನಾಂಗಕ್ಕೆ ಮಾದರಿ. ನಮ್ಮದು ಸುಂದರ ಮನಸ್ಸಿನ ದೇಶ, ಶಿಕ್ಷಣವು ಒಂದು ಶಕ್ತಿಶಾಲಿ ಸಾಧನವಾಗಿದೆ, ಅಂಬೇಡ್ಕರ್ ಬಹಳ ಕಷ್ಟ ಪಟ್ಟು ಓದಿ ಸಮಾಜಕ್ಕೆ ಬೆಳಕಾದವರು, ಅದೇ ರೀತಿ ಕೂಡ ನಾವು ಪಡೆದುಕೊಂಡ ಶಿಕ್ಷಣ ಸಮಾಜಕ್ಕೆ ಅನುಕೂಲಕರವಾಗಿರಬೇಕು ಆ ನಿಟ್ಟಿನಲ್ಲಿ ನಾವೆಲ್ಲರೂ ಕೂಡ ಓದಬೇಕು ಎಂದು ದಕ್ಷಿಣ ಕನ್ನಡ ನೆಹರು ಯುವ ಕೇಂದ್ರ ಸಂಘಟನೆಯ ಪೂರ್ವತನ ಜಿಲ್ಲಾ ಯುವ ಅಧಿಕಾರಿ ರಘುವೀರ್, ಸೂಟರ್ ಪೇಟೆ ಹೇಳಿದರು.
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಇಲ್ಲಿ ಜರುಗಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೪ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಶಿಕ್ಷಣದಲ್ಲಿ ಕ್ರಾಂತಿ ಮಾಡಿದ್ದಾರೆ, ಶಿಕ್ಷಣ ಪಡೆದುಕೊಳ್ಳಲು ಬಡತನ ಎಂದೂ ಅಡ್ಡಿಯಾಗುವುದಿಲ್ಲ ಜ್ಞಾನದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ, ಶ್ರೇಷ್ಟವ್ಯಕ್ತಿಗಳ ಮಹಾನ್ ಸಾಧನೆಗಳನ್ನು ಯುವಕರು ಅಭ್ಯಸಿಸಿ, ಅಳವಡಿಸಿಕೊಂಡರೆ ಸಮಾಜವನ್ನು ಉತ್ತಮ ಮಾರ್ಗದೆಡೆಗೆ ತೆಗೆದುಕೊಂಡು ಹೊಗಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೋ. ಗಣಪತಿ ಗೌಡ ಮಾತನಾಡಿ, ಅಂಬೇಡ್ಕರ್ ತಮ್ಮ ಅಗಾಧವಾದ ಪಾಂಡಿತ್ಯದ ಮೂಲಕ ಪ್ರಪಂಚದಲ್ಲಿಯೇ ಶ್ರೇಷ್ಟ ಸಂವಿಧಾನವನ್ನು ನಿರ್ಮಿಸಿದ್ದಾರೆ, ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಅಂಬೇಡ್ಕರ್ ಪ್ರಯತ್ನ ಪಟ್ಟಿದ್ದಾರೆ ಹಾಗೂ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅಂಬೇಡ್ಕರ್ ದೇಶಕ್ಕೆ ಕೊಡುಗೆ ಕೊಟ್ಟಿದ್ದಾರೆ, ‘ಹೋರಾಟ ಮಾಡದಿದ್ದರೂ ಪರವಾಗಿಲ್ಲ ಮಾರಾಟವಾಗಬೇಡ’ ಎಂದು ಅಂಬೇಡ್ಕರ್ ಹೇಳಿದ್ದರು ಎಂದರು.
ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಕುರಿತು ವಿಚಾರ ಮಂಡಿಸಿದರು. ವೇದಿಕೆಯಲ್ಲಿ ಕಾರ್ಯಕ್ರಮ ಸಂಚಾಲಕ ಪ್ರೊ. ರಾಮಕೃಷ್ಣ ಬಿ.ಎಂ., ಗ್ರಂಥಪಾಲಕಿ ಡಾ. ವನಜಾ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ. ಸುರೇಶ್ ಮತ್ತು ಡಾ. ಗಾಯತ್ರಿ ಎನ್, ಆಂತರಿಕ ಗುಣಮಟ್ಟ ಖಾತರಿಕೋಶ ಡಾ. ಸಿದ್ದರಾಜು ಎಂ.ಎನ್. ಉಪಸ್ಥಿತರಿದ್ದರು.
ಪ್ರೊ. ರಾಮಕೃಷ್ಣ ಬಿ.ಎಂ. ಸ್ವಾಗತಿಸಿ, ಗ್ರಂಥಪಾಲಕಿ ಡಾ. ವನಜಾ ವಂದಿಸಿದರು.