
ಜನರ ಬದುಕಿನ ಕುರಿತು ಧ್ವನಿ ಎತ್ತುವುದು,ಹೋರಾಟಗಳನ್ನು ಸಂಘಟಿಸುವುದೇ ನಿಜವಾದ ರಾಜಕಾರಣ: ಮುನೀರ್ ಕಾಟಿಪಳ್ಳ
ಮಂಗಳೂರು: ಇಲ್ಲಿನ ಪ್ರತಿಯೊಬ್ಬ ಶಾಸಕ, ಮಾಜಿ ಶಾಸಕನಿಗೆ ಪ್ರತಿಷ್ಟೆ ಮೆರೆಯುವ ಒಂದೊಂದು ಕಂಬಳಗಳಿವೆ. ಇದರಿಂದ ಜನ ಸಾಮಾನ್ಯರ ಬದುಕಿನ ಬೇಡಿಕೆಗಳ ಧ್ವನಿ ಕಳೆದುಕೊಂಡಿವೆ. ಸಿಪಿಐಎಂ ಪಕ್ಷ ಮಾತ್ರ ಇದಕ್ಕೆ ವಿರುದ್ದವಾಗಿ ನಿಜವಾದ ಜನ ರಾಜಕಾರಣ ಮಾಡುತ್ತಿದೆ. ಶಿಕ್ಷಣ, ಉದ್ಯೋಗ, ಆರೋಗ್ಯ, ವಸತಿಯ ಹಕ್ಕುಗಳಿಗಾಗಿ ನಿರಂತರ ಧ್ವನಿ ಎತ್ತುತ್ತಾ ಬಂದಿದೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹೇಳಿದರು.
ಅವರು ಸಿಪಿಐಎಂ ಉಳ್ಳಾಲ ಮತ್ತು ಮುಡಿಪು ವಲಯ ಸಮಿತಿಗಳು ಎಪ್ರಿಲ್ 29 ರಂದು ದೇರಳಕಟ್ಟೆಯಲ್ಲಿ ಆಯೋಜಿಸಿರುವ ಉಳ್ಳಾಲ ತಾಲೂಕಿನ ಸಮಗ್ರ ಅಭಿವೃದ್ಧಿಯ ಬೇಡಿಕೆಗಳ ಮೇಲಿನ ಹಕ್ಕೊತ್ತಾಯ ಸಮಾವೇಶದ ಪ್ರಚಾರಾರ್ಥವಾಗಿ ಹಮ್ಮಿಕೊಂಡಿರುವ ಎರಡು ದಿನಗಳ ವಾಹನ ಜಾಥಾವನ್ನು ಮುಡಿಪು ಜಂಕ್ಷನ್ ನಲ್ಲಿ ಉದ್ಘಾಟಿಸಿ ಮಾತನಾಡಿದರು.
ಜನರ ಬದುಕಿನ ಕುರಿತು ಧ್ವನಿ ಎತ್ತುವುದು, ಹೋರಾಟಗಳನ್ನು ಸಂಘಟಿಸುವುದು ನಿಜವಾದ ರಾಜಕಾರಣ. ಆದರೆ, ತುಳುನಾಡು ಅದಕ್ಕೆ ವಿರುದ್ಧವಾಗಿ ಚಲಿಸುತ್ತಿದೆ. ಇಲ್ಲಿನ ಬಿಜೆಪಿ, ಕಾಂಗ್ರೆಸ್ ಪಕ್ಷದ ಮುಖಂಡರು, ಜನಪ್ರತಿನಿಧಿಗಳು ಅಬ್ಬರದ ಕಂಬಳ, ಹುಲಿ ಕುಣಿತ, ಹೊನಲು ಬೆಳಕಿನ ಕ್ರೀಡಾಕೂಟಗಳನ್ನು ಹಮ್ಮಿಕೊಂಡು ಜನರ ಗಮನ ಸೆಳೆಯುವುದೇ ರಾಜಕಾರಣವನ್ನಾಗಿಸಿವೆ ಎಂದರು.
ಉಳ್ಳಾಲ ತಾಲೂಕು ಉಳ್ಳವರ, ಖಾಸಗಿ ಶಿಕ್ಷಣ, ಆರೋಗ್ಯದ ಲಾಭಿಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಮರಳು ಹಾಗೂ ಕೆಂಪು ಮಣ್ಣು ಮಾಫಿಯಾಗಳು ಇಡೀ ಉಳ್ಳಾಲವನ್ನು ತಮ್ಮ ಕಪಿ ಮುಷ್ಟಿಯಲ್ಲಿ ಇಟ್ಟುಕೊಂಡಿವೆ. ಸ್ಥಳೀಯರ ಮಕ್ಕಳು ಶಿಕ್ಷಣ ಪಡೆಯಲು ಒಂದು ಸರಕಾರಿ ಪದವಿ ಕಾಲೇಜೂ ಇಲ್ಲದ ದುಸ್ಥಿತಿ ಇಲ್ಲಿನದು. ಬಡವರಿಗೆ ವಸತಿ ಒದಗಿಸುವುದನ್ನು ಆಡಳಿತ ಪೂರ್ತಿ ಮರೆತು ಬಿಟ್ಟಿದೆ. ತಾಲೂಕು ರಾಜಕಾರಣ ಪೂರ್ತಿಯಾಗಿ ಬಲಿಷ್ಟ ಲಾಭಿಗಳಿಗೆ ಶರಣಾಗಿವೆ. ಇಂತಹ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಸ್ಥಳೀಯ ಸಮಿತಿಗಳು ಜನ ಸಾಮಾನ್ಯರ ಬೇಡಿಕೆಗಳ ಪರವಾಗಿ ಧ್ವನಿ ಎತ್ತಲು ಮುಂದಾಗಿರುವುದು ಅಭಿನಂದನೀಯ ಎಂದು ಹೇಳಿದರು.
ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಉಳ್ಳಾಲ ತಾಲೂಕು ಆಗಿ ಐದು ವರ್ಷಗಳು ದಾಟಿದರೂ ಸುಸಜ್ಜಿತ ತಾಲೂಕು ಕಚೇರಿ ಕನಸಾಗಿಯೆ ಉಳಿದಿದೆ. ಒಂದು ತಾಲೂಕಿನ ಕಡ್ಡಾಯವಾಗಿ ದೊರಕಬೇಕಾದ ತಾಲೂಕು ಆಸ್ಪತ್ರೆ, ಪದವಿ ಕಾಲೇಜು, ನ್ಯಾಯಾಲಯ, ಕ್ರೀಡಾಂಗಣ, ಪಾಲಿಟೆಕ್ನಿಕಲ್ ಯಾವುದೂ ದೊರಕಿಲ್ಲ. ದಲಿತರ, ಆಟೋ ಚಾಲಕರ, ಕುದ್ರು ವಾಸಿಗಳ, ಬೀದಿಬದಿ ವ್ಯಾಪಾರಿಗಳ,ವಸತಿ ರಹಿತರ ಸಮಸ್ಯೆ ಕೇಳುವವರೇ ಇಲ್ಲವಾಗಿ ತಾಲೂಕು ಘೋಷಣೆ ಆಳುವವರ ಸಿಂಗಾರಕ್ಕೆ ಮಾತ್ರ ಸೀಮಿತವಾಗಿದೆ. ಇಂತಹ ಸಂದರ್ಭದಲ್ಲಿ ಹೊಸ ತಾಲೂಕಿಗೆ ಸಿಗಬೇಕಾದ ಮೂಲಭೂತ ಸೌಲಭ್ಯಗಳನ್ನು ಪಡೆಯಲು ಹಾಗೂ ಜನ ಸಾಮಾನ್ಯರ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಬ್ರಹತ್ ಮೆರವಣಿಗೆ ಹಾಗೂ ಹಕ್ಕೊತ್ತಾಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುಕುಮಾರ್ ತೊಕ್ಕೋಟು, ಬಿ ಎಂ ಭಟ್,ಜಿಲ್ಲಾ ಸಮಿತಿ ಸದಸ್ಯರಾದ ರಫೀಕ್ ಹರೇಕಳ, ಈಶ್ವರೀ ಬೆಳ್ತಂಗಡಿ, ಶೇಖರ್ ಕುಂದರ್, ಉಭಯ ವಲಯ ಸಮಿತಿ ಮುಖಂಡರಾದ ಸುಂದರ ಕುಂಪಲ,ಪ್ರಮೋದಿನಿ ಕಲ್ಲಾಪು, ರಿಜ್ವಾನ್ ಹರೇಕಳ, ರೋಹಿದಾಸ್ ಭಟ್ನಗರ, ಪದ್ಮನಾಭ ಕುಂಪಲ,ರಜಾಕ್ ಮುಡಿಪು,ರಜಾಕ್ ಮೊಂಟೆಪದವು,ಸಾಮಾಜಿಕ ಹೋರಾಟಗಾರರಾದ ಅಬೂಬಕ್ಕರ್ ಜೆಲ್ಲಿ,ಹಿರಿಯ ಮುಖಂಡರಾದ ಮೊಯಿದಿನಬ್ಬ,ಮಹಿಳಾ ಮುಖಂಡರಾದ ಅಸುಂತ ಡಿಸೋಜ,ಫ್ಲೇವಿ ಕ್ರಾಸ್ತಾ, ಯೋಗಿತಾ,ಮಾಲತಿ, ಯುವಜನ ನಾಯಕರಾದ ಇರ್ಫಾನ್ ಇರಾ,ರಫೀಕ್ ಮೊಂಟೆಪದವು,ಫಾರೂಕ್ ಕೋಣಾಜೆ,ಮುಸ್ತಾಫ ಸುರತ್ಕಲ್,ಕಾರ್ಮಿಕ ಮುಖಂಡರಾದ ಕಲಂದರ್ ಕೋಟೆಕಾರ್,ಸಲೀಂ ಕಿನ್ಯಾ, ವಿಧ್ಯಾರ್ಥಿ ನಾಯಕ ಅಮೀನ್ ಮೊಂಟೆಪದವು ಮತ್ತಿತರರು ಉಪಸ್ಥಿತರಿದ್ದರು.
ಜಾಥಾ ಕಾರ್ಯಕ್ರಮವು ಬಳಿಕ ಇರಾ, ಸಜಿಪ, ಬೋಳಿಯಾರ್ ಗಳಲ್ಲಿ ನಡೆದು ಪ್ರಮುಖ ಭಾಷಣಕಾರರಾಗಿ CPIM ನಾಯಕರಾದ ಬಿ.ಎಂ. ಭಟ್, ಈಶ್ವರೀ ಬೆಳ್ತಂಗಡಿ, ಕೃಷ್ಣಪ್ಪ ಸಾಲ್ಯಾನ್, ರಿಜ್ವಾನ್ ಹರೇಕಳ, ಸುನಿಲ್ ಕುಮಾರ್ ಬಜಾಲ್ ಮಾತನಾಡಿದರು.