
ನಾಳೆಯಿಂದ ಮೂಡುಬಿದಿರೆಯಲ್ಲಿ 'ಎಂ.ಎಸ್.ಸಿ.ಟ್ರೋಫಿ' ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ
ಮೂಡುಬಿದಿರೆ: ಮೂಡುಬಿದಿರೆಯ ಪ್ರತಿಷ್ಠಿತ ತಂಡವಾಗಿರುವ ಮೂಡುಬಿದಿರೆ ಸ್ಪೋರ್ಟ್ಸ್ ಕ್ಲಬ್ (ಎಂ.ಎಸ್.ಸಿ)ನ 35ನೇ ವರ್ಷದ ಅಂಗವಾಗಿ ಐದು ದಿವಸಗಳ ಹೊನಲುಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ನಾಳೆಯಿಂದ 26 ರ ವರೆಗೆ (ಎ.22-26) ನಡೆಯಲಿದೆ ಎಂದು ಎಂ.ಎಸ್.ಸಿ.ಅಧ್ಯಕ್ಷ ಅಬುಲ್ ಅಲಾ ಪುತ್ತಿಗೆ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೂಡುಬಿದಿರೆಯಲ್ಲಿ 1999 ರಲ್ಲಿ ಪ್ರಪ್ರಥಮ ಬಾರಿಗೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿ ದಾಖಲೆ ಬರೆದಿರುವ ಎಂ.ಎಸ್.ಸಿ.ತಂಡವು ಇದೀಗ ಮತ್ತೊಮ್ಮೆ ಐದು ದಿವಸಗಳ ಹೊನಲು ಬೆಳಕಿನ ಪಂದ್ಯವನ್ನು ಆಯೋಜಿಸುತ್ತಿದೆ.ಪ್ರಥಮ ಬಹುಮಾನ ರೂ.1,50,000 ಹಾಗೂ ದ್ವಿತೀಯ ಬಹುಮಾನ ರೂ.1,00,000 ದಂತಹ ದೊಡ್ಡ ಮೊತ್ತದ ಬಹುಮಾನಗಳನ್ನು ನೀಡುತ್ತಿರುವುದು ಮೂಡುಬಿದಿರೆಯಲ್ಲಿ ಇದೇ ಮೊದಲ ಬಾರಿಯಾದರೆ ಐದು ದಿವಸಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯ ಕೂಡಾ ಮೂಡುಬಿದಿರೆಯ ಇತಿಹಾಸದಲ್ಲಿ ಪ್ರಥಮ ಎಂದವರು ಮಾಹಿತಿ ನೀಡಿದರು.
ದ.ಕ, ಕಾಸರಗೋಡು, ಉಡುಪಿ ಜಿಲ್ಲೆಗಳ ಖ್ಯಾತ ಆಟಗಾರರು ಭಾಗವಹಿಸುವ ಈ ಪಂದ್ಯಾ ಕೂಟದಲ್ಲಿ ಒಟ್ಟು 24 ಪ್ರತಿಷ್ಠಿತ ಹಾಗೂ ಬಲಿಷ್ಠ ತಂಡಗಳು ಭಾಗವಹಿಸುತ್ತಿದೆ ಎಂದ ಅವರು ಎಂ.ಎಸ್.ಸಿ.ತಂಡವು ಕಳೆದ 35 ವರ್ಷಗಳಲ್ಲಿ ಉಭಯ ಜಿಲ್ಲೆಗಳಲ್ಲಿ ಸಾಕಷ್ಟು ಬಹುಮಾನಗಳನ್ನು ಪಡೆದುಕೊಳ್ಳುವ ಮೂಲಕ ಮೂಡುಬಿದಿರೆಯ ಪ್ರತಿಷ್ಠಿತ ತಂಡವೆನಿಸಿಕೊಂಡರೆ ಹಲವಾರು ಪಂದ್ಯಾಕೂಟಗಳನ್ನು ಆಯೋಜನೆ ಮಾಡುವ ಮೂಲಕ ಉತ್ತಮ ಸಂಯೋಜನಾ ತಂಡವೆಂಬ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ನಾಳೆ ಸಂಜೆ 6 ಗಂಟೆಗೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಪಂದ್ಯಾಕೂಟವನ್ನು ಉದ್ಘಾಟಿಸಲಿದ್ದು ಮಾಜಿ ಸಚಿವ ಕೆ.ಅಭಯಚಂದ್ರ, ಮಿಥುನ್ ರೈ,ಉದ್ಯಮಿ ನಾರಾಯಣ ಪಿ.ಎಂ, ಬಿಜೆಪಿ ಮುಖಂಡ ಸುದರ್ಶನ ಎಂ, ಪುರಸಭಾ ಸದಸ್ಯ ಸುರೇಶ್ ಪ್ರಭು ಸಹಿತ ಈ ಸಂದರ್ಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಎಂ.ಎಸ್.ಸಿ.ಟ್ರೋಫಿ ಸಂಯೋಜಕರಾದ ಮುಹಮ್ಮದ್ ಅಶ್ರಫ್, ಮುಹಮ್ಮದ್ ಖಾಸಿಮ್ ಹಾಗೂ ಮುಹಮ್ಮದ್ ಆಸಿಫ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.