ತಾಯಿ ಉನ್ನತ ಶ್ರೇಣಿ-ಮಗಳು ಅತ್ಯುನ್ನತ ಶ್ರೇಣಿ: ಮನೆಯಲ್ಲಿ ಪಿಯು ಸಾಧನಾ ಸಂಭ್ರಮ

ತಾಯಿ ಉನ್ನತ ಶ್ರೇಣಿ-ಮಗಳು ಅತ್ಯುನ್ನತ ಶ್ರೇಣಿ: ಮನೆಯಲ್ಲಿ ಪಿಯು ಸಾಧನಾ ಸಂಭ್ರಮ


ಶಿರ್ವ: ಮಗಳು ಸನ್ನಿಧಿ ಎಚ್. ಪೂಜಾರಿ ಮೂಡುಬೆಳ್ಳೆ ನೆಲ್ಲಿಕಟ್ಟೆ ಜ್ಞಾನಗಂಗಾ ಪ.ಪೂ. ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ 542(90%) ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಿದ್ದಂತೆಯೇ ಆ ಕಡೆಯಿಂದ ತಾಯಿ ಸುನೀತಾ ಪೂಜಾರಿ ಖಾಸಗಿಯಾಗಿ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಉಡುಪಿ ಇಲ್ಲಿ ಪರೀಕ್ಷೆಗೆ ಹಾಜಾರಾಗಿ ಕಲಾ ವಿಭಾಗದಲ್ಲಿ 401(67%) ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಮನೆಯಲ್ಲಿ ‘ಪಿಯು ಸಾಧನಾ ಸಂಭ್ರಮ’ದ ವಾತಾವರಣಕ್ಕೆ ನಾಂದಿಯಾಯಿತು.

ಸುನೀತಾರವರ ಪತಿ ಹರೀಶ್ ಪೂಜಾರಿ ಉಡುಪಿ ಶಾಂಭವಿ ಕನಸ್ಟ್ರಕ್ಷನ್‌ನಲ್ಲಿ ಪ್ಲಂಬರ್ ಆಗಿದ್ದು, ಮಗ ಸಾತ್ವಿಕ್ ಎಚ್. ಪೂಜಾರಿ ಮಣಿಪಾಲ ಸರಕಾರಿ ಪಾಲಿಟಿಕ್ನಿಕ್ ಕಾಲೇಜಿನಲ್ಲಿ ಅಂತಿಮ ವರ್ಷದ ಮ್ಯಾಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ತಾಯಿ ಮಗಳ ಸಂಭ್ರಮಕ್ಕೆ ಸಾಥ್ ನೀಡಿದರು. ಮೂಡುಬೆಳ್ಳೆಯಲ್ಲಂತೂ ತಾಯಿ ಮಗಳ ಪಿಯುಸಿ ಸಾಧನೆಯದ್ದೇ ಸುದ್ಧಿ.

ಮೂಡುಬೆಳ್ಳೆ ಕೊಂಗಿಬೈಲು ನಿವಾಸಿಯಾದ ಸುನೀತಾ ಮೂಡುಬೆಳ್ಳೆ ದೇವರಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ ಕಳೆದ 27 ವರ್ಷಗಳಿಂದ ಶಿಕ್ಷಕಿಯಾಗಿ ಕರ್ತವ್ಯದಲ್ಲಿದ್ದಾರೆ. 121 ಕಾಪು ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 101ರ ಮತಗಟ್ಟೆ ಅಧಿಕಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. 1994ರಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿ ಮನೆಯಲ್ಲಿದ್ದರು. 18ನೇ ವರ್ಷದ ಹರೆಯದಲ್ಲೇ ಅಂಗನವಾಡಿ ಕಾರ್ಯಕರ್ತೆಯಾಗಿ ನೇಮಕಗೊಂಡಿದ್ದರು. ಈವರೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಪದೋನ್ನತಿ ಹೊಂದಲು ಎಸ್‌ಎಸ್‌ಎಲ್‌ಸಿ ತೇರ್ಗಡೆ ಮತ್ತು ಸೇವಾವಧಿ ಸಾಕಾಗಿತ್ತು. ಇದೀಗ ಸರಕಾರ ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ/ಯುಕೆಜಿ ಪ್ರಾರಂಭಿಸುವ ಸಿದ್ದತೆಯಲ್ಲಿದ್ದು, ಕಾರ್ಯಕರ್ತೆಯರಿಗೆ ಪದೋನ್ನತಿ ಹೊಂದಲು ಪಿಯುಸಿ ಉತ್ತೀರ್ಣರಾಗಿರಲೇ ಬೇಕು ಎಂಬ ನಿಯಮ ಇರುವುದರಿಂದ ಎಸ್‌ಎಸ್‌ಎಲ್‌ಸಿ ಪಾಸಾಗಿ 31 ವರ್ಷಗಳ ಬಳಿಕ ಸುನೀತಾ ಇವರು ಮೊದಲ ಪ್ರಯತ್ನದಲ್ಲೇ ಕಲಾ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಅರ್ಹತೆಯ ಗುರಿ ತಲುಪಿದ್ದಾರೆ.

ತನ್ನ ಸಾಧನೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಪತಿ, ಮಗ, ಮಗಳು, ಅಂಗನವಾಡಿ ಮೇಲ್ವಿಚಾರಕರು, ಸಹೋದ್ಯೋಗಿಗಳು ಮತ್ತು ಅಂಗನವಾಡಿ ಕೇಂದ್ರದ ಸಹಾಯಕರಿಗೆ ತುಂಬುಹೃದಯದ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ ಸುನೀತಾ.

ನವೆಂಬರ್ 27ಕ್ಕೆ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, ಡಿಸೆಂಬರ್‌ನಲ್ಲಿ ಪುಸ್ತಕಗಳನ್ನು ಓದಲು ಪ್ರಾರಂಭಿಸಿದ್ದು, ಅಲ್ಲದೆ ಯೂಟ್ಯೂಬ್‌ನಲ್ಲಿ ಮಾಹಿತಿ ಸಂಗ್ರಹಿಸಿ ಪರೀಕ್ಷಾ ನೋಟ್ಸ್ ಸಿದ್ಧಗೊಳಿಸಿ ಉದ್ಯೋಗ ಹಾಗೂ ಮನೆವಾರ್ತೆಯ ಜೊತೆಜೊತೆಯಲ್ಲೇ ಹೊಂದಾಣಿಕೆ ಮಾಡಿ ನಿರಂತರವಾಗಿ ಅಭ್ಯಾಸ ಮಾಡಿದ್ದರಿಂದ ನಿರೀಕ್ಷೆಗೂ ಮೀರಿದ ಈ ಸಾಧನೆ ಆಗಿದೆ. ಸಂತೋಷ ಹಾಗೂ ಹೆಮ್ಮೆ ಅನಿಸುತ್ತಿದೆ. ಮುಂದೆ ಕಲಾ ವಿಭಾಗದಲ್ಲಿ ಪದವಿ ಶಿಕ್ಷಣವನ್ನು ಮಾಡಬೇಕು ಎಂಬ ಗುರಿ ಇಟ್ಟುಕೊಂಡಿದ್ದೇನೆ, ಪತಿ ಹಾಗೂ ಮಕ್ಕಳ ಪ್ರೋತ್ಸಾಹವೂ ಇದೆ ಎನ್ನುತ್ತಾರೆ ಸುನೀತಾ ಪೂಜಾರಿ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article