
ಕಮಿಷನ್ ನೆಪದಲ್ಲಿ ಮಹಿಳೆಗೆ ಲಕ್ಷಾಂತರ ವಂಚನೆ
ಸುಬ್ರಹ್ಮಣ್ಯ: ಹಣ ಡೆಪಾಸಿಟ್ ಮಾಡಿದರೆ ಕಮಿಷನ್ ನೀಡುವುದಾಗಿ ಹಣ ಜಮೆ ಮಾಡಿಕೊಂಡು ಸುಳ್ಯ ತಾಲೂಕಿನ ಗುತ್ತಿಗಾರಿನ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿದ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುತ್ತಿಗಾರಿನ 30 ವರ್ಷದ ಮಹಿಳೆ ಈ ಬಗ್ಗೆ ದೂರು ನೀಡಿದ್ದಾರೆ. ಮಹಿಳೆ ಮಾ.19ರಂದು ಟೆಲಿಗ್ರಾಂ ಖಾತೆಯಿಂದ ಏರ್‌ಫಝ್ ಎಂಬ ಕಂಪೆನಿಯಲ್ಲಿ ಟಿಕೆಟ್ ಕಂಪ್ಲೀಟ್ ಮಾಡಿದರೆ ಕಮೀಷನ್ ನೀಡುವುದಾಗಿ ತಿಳಿಸಿ ಲಿಂಕ್ ಕಳುಹಿಸಿದ್ದು ಸದ್ರಿ ಲಿಂಕನ್ನು ಒತ್ತಿದಾಗ ಅದರಲ್ಲಿ ಅಕೌಂಟ್ ತೆರೆದು ಲಾಗಿನ್ ಆಗಲು ತಿಳಿಸಿದ್ದು, ಅದರಂತೆ ಮಹಿಳೆ ತನ್ನ ಹೆಸರಿನಲ್ಲಿ ಖಾತೆ ತೆರೆದಿದು ನಂತರ ಏರ್‌ಫಝ್ ಕಸ್ಟಮರ್ ಕೇರ್ ಟೆಲಿಗ್ರಾಂ ಖಾತೆಯಿಂದ ಹಣ ಡೆಪಾಸಿಟ್ ಮಾಡಿದರೆ ಕಮೀಷನ್ ಸಿಗುವುದಾಗಿ ತಿಳಿಸಿದ್ದು, ಅದರಂತೆ ಮಹಿಳೆ 11,500 ರೂ. ಹಣ ಡೆಪಾಸಿಟ್ ಮಾಡಿದ್ದು, ಅದಕ್ಕೆ ಕಮೀಷನ್ ಆಗಿ 21,109 ರೂ. ಹಣ ಮಹಿಳೆಯ ಬ್ಯಾಂಕ್ ಖಾತೆಗೆ ಬಂದಿರುತ್ತದೆ.
ನಂತರ ಇನ್ನು ಹೆಚ್ಚಿನ ಹಣ ಡೆಪಾಸಿಟ್ ಮಾಡಲು ತಿಳಿಸಿದ್ದಕ್ಕೆ ಮಹಿಳೆ ಹಂತ ಹಂತವಾಗಿ ಅಪರಿಚಿತ ವ್ಯಕ್ತಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಒಟ್ಟು 11,21,863 ರೂ. ಹಣ ಕಳುಹಿಸಿದ್ದು, ಆ ಹಣವನ್ನು ಪಡದು ಯಾವುದೇ ಕಮೀಷನ್ ನೀಡದೇ ಮೋಸ ಮಾಡಿರುವುದಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.