
ಬಸ್ ನಿಲ್ದಾಣದ ಬಳಿಯಲ್ಲಿ ಮರ ಬೆಳೆಸಿದ ರಿಕ್ಷಾ ಚಾಲಕರಿಗೆ ಶಹಬ್ಬಾಸ್‌ಗಿರಿ: ಪ್ರಮಾಣ ಪತ್ರ, ಪ್ರೋತ್ಸಾಹ ಧನ ನೀಡಿ ಅಭಿನಂದನೆ
ಸುಳ್ಯ: ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿಯಲ್ಲಿ ಸುಂದರ ನೆರಳಿನ ಮರವನ್ನು ಬೆಳೆಸಿದ ರಿಕ್ಷಾ ಚಾಲಕರಿಗೆ ಪರಿಸರ ತಜ್ಞ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ. ಆರ್.ಕೆ. ನಾಯರ್ ಅವರಿಂದ ಶಹಬ್ಬಾಸ್‌ಗಿರಿ ನೀಡಿದ್ದಾರೆ.
ಏ.22ರ ವಿಶ್ವ ಭೂಮಿ ದಿನದ ಅಂಗವಾಗಿ ಶುಭಕೋರಿದ ಅವರು ಭಗತ್ ಸಿಂಗ್ ಅಟೋ ಸ್ಟಾಂಡ್‌ನ ರಿಕ್ಷಾ ಚಾಲಕರಿಗೆ ಫಾರೆಸ್ಟ್ ಕ್ರಿಯೇಟರ್ಸ್ ಆಫ್ ಇಂಡಿಯಾ ವತಿಯಿಂದ ಪ್ರಮಾಣ ಪತ್ರ ಹಾಗೂ 25 ಸಾವಿರ ರೂ. ಪ್ರೋತ್ಸಾಹ ಧನ ನೀಡಿ ಗೌರವಿಸಿದರು.
ಸಾಮಾನ್ಯವಾಗಿ ಶೀಟ್ ಹಾಕಿ ಶೆಡ್ ನಿರ್ಮಿಸಿ ರಿಕ್ಷಾ ನಿಲ್ದಾಣ ಮಾಡುತ್ತಾರೆ. ಆದರೆ ಬಸ್ ನಿಲ್ದಾಣದ ಬಳಿಯ ಭಗತ್ ಸಿಂಗ್ ಅಟೋ ಸ್ಟಾಂಡ್‌ನ ಚಾಲಕರು ಇಲ್ಲಿ ಮರಗಳನ್ನು ಬೆಳೆಸಿ ಪೋಷಿಸಿರುವುದು ಶ್ಲಾಘನೀಯ ಎಂದು ಡಾ. ಆರ್.ಕೆ. ನಾಯರ್ ಹೇಳಿದರು.
ಕಡು ಬೇಸಿಗೆಯಲ್ಲಿ ನೆರಳನ್ನೂ, ತಂಪಾದ ಗಾಳಿಯನ್ನೂ ನೀಡುವ ಈ ಮರಗಳು ಕಣ್ಣಿಗೆ, ಮನಸ್ಸಿಗೆ ಆನಂದವನ್ನು ನೀಡುತ್ತದೆ. ಈ ರೀತಿ ಮರ ಬೆಳೆಸಲು ಎಲ್ಲರಿಗೂ ಪ್ರೇರಣೆ ಆಗಬೇಕು. ಈ ನಿಟ್ಟಿನಲ್ಲಿ ರಿಕ್ಷಾ ಚಾಲಕ ಸಂಘಟನೆಯನ್ನು ಗುರುತಿಸಿ ಗೌರವಿಸಲಾಗಿದೆ ಎಂದು ಡಾ. ನಾಯರ್ ಹೇಳಿದರು.
ಈ ಮರಗಳನ್ನು ಯಾವ ಕಾರಣಕ್ಕೂ ಕಡಿಯಲು ಬಿಡಬೇಡಿ, ರಸ್ತೆ ಮತ್ತಿತರ ಅಭಿವೃದ್ಧಿ ಸಂದರ್ಭದಲ್ಲಿ ಮರ ಕಡಿಯುವುದು ಅನಿವಾರ್ಯವಾದರೆ ಸೂಕ್ತ ಪರಿಹಾರ ಪಡೆದು ಈ ಮರಗಳನ್ನು ಬೇರೆಡೆ ಸ್ಥಳಾಂತರ ಮಾಡಿ ಪೋಷಿಸಿ ಎಂದು ಅವರು ಸಲಹೆ ನೀಡಿದರು.
ಬಿಎಂಎಸ್ ರಿಕ್ಷಾ ಚಾಲಕರ ಸಂಘಟನೆಯ ಅಧ್ಯಕ್ಷ ಪ್ರಕಾಶ್, ಕೋಶಾಧಿಕಾರಿ ರವಿ ಜಾಲ್ಸೂರು, ಕಾರ್ಯದರ್ಶಿ ನಾರಾಯಣ, ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ಬೈತ್ತಡ್ಕ, ವಿಜಯಕುಮಾರ್ ಉಬರಡ್ಕ, ಪದಾಧಿಕಾರಿಗಳಾದ ಸುಂದರ, ಲೋಕೇಶ್, ಭಾನುಪ್ರಕಾಶ್, ಕಾರ್ತಿಕ್, ಪ್ರಭಾಕರ್, ದಿನಕರ್ ಮತ್ತಿತರರು ಉಪಸ್ಥಿತರಿದ್ದರು.
ರಿಕ್ಷಾ ಚಾಲಕರ ಸಂಘದ ವತಿಯಿಂದ ಡಾ. ಆರ್.ಕೆ. ನಾಯರ್ ಅವರನ್ನು ಸನ್ಮಾನಿಸಲಾಯಿತು.