ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಜಿಲ್ಲಾ ಮಟ್ಟದ ಸಂವಾದ ಸಭೆ

ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಜಿಲ್ಲಾ ಮಟ್ಟದ ಸಂವಾದ ಸಭೆ


ಮಂಗಳೂರು: ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಜಿಲ್ಲಾ ಮಟ್ಟದ ಸಂವಾದ ಸಭೆ ಆರ್ಥಿಕ ತಜ್ಞ ಪ್ರೊ. ಎಂ ಗೋವಿಂದರಾವ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ನಡೆಯಿತು.

ಆರ್ಥಿಕ ತಜ್ಞ ಪ್ರೊ. ಎಂ ಗೋವಿಂದರಾವ್ ಮಾತನಾಡಿ, ರಾಜ್ಯದಲ್ಲಿ ಉತ್ತರ ಕರ್ನಾಟಕದ 59 ತಾಲೂಕುಗಳು ಹಾಗೂ ದಕ್ಷಿಣ ಕರ್ನಾಟಕದ ಹಿಂದುಳಿದ 55 ತಾಲೂಕುಗಳೆಂದು ಗುರುತಿಸಲಾಗಿದೆ. ಅಭಿವೃದ್ಧಿಗೆ ಅನುದಾನದ ಹಣ ಬಳಕೆಯಾದರೂ ಕೂಡಾ ಕೆಲವು ತಾಲೂಕುಗಳು ಶಿಕ್ಷಣ ಕ್ಷೇತ್ರ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದದೆ, ಹಿಂದುಳಿದಿದೆ ಎಂದು ಹೇಳಿದರು. 

ಪ್ರಾದೇಶಿಕ ಅಸಮತೋಲನ ಸಮಿತಿ ರಚಿಸಲಾಗಿದ್ದು, ಅಸಮತೋಲನ ನಿವಾರಿಸಲು ಕೆಲವು ಮುಖ್ಯ ಅಂಶಗಳನ್ನು  ಸಮಿತಿಯು ಸರಕಾರಕ್ಕೆ ಶಿಫಾರಸ್ಸು ಮಾಡಲಾಗುತ್ತದೆ ಎಂದು  ಹೇಳಿದರು.

ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಮೂಡಬಿದ್ರೆ ತಾಲೂಕಿನಲ್ಲಿ ಸರಕಾರಿ ಶಿಕ್ಷಣ ಸಂಸ್ಥೆ  ಇಲ್ಲದಿರುವುದರಿಂದ ಬಡ ವಿದ್ಯಾರ್ಥಿಗಳ ಕಲಿಕೆಗೆ  ತೊಂದರೆಯಾಗುತ್ತಿದೆ. ಆದ್ದರಿಂದ ತಾಲೂಕು ವಲಯಗಳಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಸಲಹೆ ನೀಡಿದರು. ಮುಲ್ಕಿ, ಕಡಬ, ಉಳ್ಳಾಲ ತಾಲೂಕುಗಳಿಗೆ ಶಿಕ್ಷಣ ಇಲಾಖೆ ವಲಯ ಕಚೇರಿಯನ್ನು ಸ್ಥಾಪಿಸಲು ಅವರು ಸಲಹೆ ನೀಡಿದರು.  

ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿಗೆ ಅವಕಾಶಗಳಿದ್ದರೂ, ಸಿ.ಆರ್.ಝಡ್. ಪ್ರಕ್ರಿಯೆಗಳಿಂದ ತ್ವರಿತ ಅನುಮೋದನೆ ಸಾಧ್ಯವಾಗುತ್ತಿಲ್ಲ. ಆದರೂ, ಪ್ರವಾಸೋದ್ಯಮ ಮೂಲಸೌಕರ್ಯಗಳಿಗೆ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು. ವೆನ್ಲಾಕ್ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವುದರಿಂದ ಇನ್ನಷ್ಟು ಉತ್ತಮ ಆರೋಗ್ಯ ವ್ಯವಸ್ಥೆಗಳು ಜನರಿಗೆ ದೊರಕಲಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಅವರು ಮಾತನಾಡಿ, ಪಶ್ಚಿಮ ಘಟ್ಟದ ಸರಹದ್ದಿನಲ್ಲಿರುವ ಕಡಬ, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಇತರೆ ತಾಲೂಕುಗಳಿಗೆ ಹೋಲಿಕೆ ಮಾಡಿದರೆ ಅಭಿವೃದ್ಧಿಯಲ್ಲಿ ಹಿಂದುಳಿಯುವಿಕೆ ಕಂಡು ಬರುತ್ತಿದೆ ಎಂದು ಹೇಳಿದರು. ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ವರದಿಯಲ್ಲಿ ಈ 3 ತಾಲೂಕುಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಕಾರ್ಯದರ್ಶಿ ಹಾಗೂ ವಿತ್ತೀಯ ಸುಧಾರಣೆ ಮತ್ತು ಯೋಜನಾ ಇಲಾಖೆ ಕಾರ್ಯದರ್ಶಿ ಡಾ. ವಿಶಾಲ್ ಆರ್ ಮಾತನಾಡಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳು ಅತ್ಯಧಿಕ ಇರುವುದರಿಂದ ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪಂಗಡ, ಅಲ್ಪಸಂಖ್ಯಾತರ ಹಾಸ್ಟೆಲ್ಗಳನ್ನು ಹೆಚ್ಚಿಸಲು ಬೇಡಿಕೆ ಇದೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿವ್ಮ್ಮಯ್ಯ ಮಾತನಾಡಿ, ಆರೋಗ್ಯ ವಲಯಕ್ಕೆ ಸಂಬಂಧಿಸಿದಂತೆ ಆಯಾಯ ತಾಲೂಕುಗಳಲ್ಲಿರುವ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ಸ್ಥಳೀಯವಾಗಿ ವೈದ್ಯಕೀಯ ಸೌಲಭ್ಯಗಳನ್ನು ಜನರಿಗೆ ಸಕಾಲಕ್ಕೆ ಉತ್ತಮ ಆರೋಗ್ಯ ವ್ಯವಸ್ಥೆ ದೊರಕಿ, ಖರ್ಚು ಕಡಿಮೆ ಆಗುತ್ತದೆ ಎಂದು ಸಲಹೆ ನೀಡಿದರು.

ಸಣ್ಣ ಕೈಗಾರಿಕೆಗಳು ಆರ್ಥಿಕ ವ್ಯವಸ್ಥೆಯ ಅಭಿವೃದ್ಧಿ ಒಂದು ಭಾಗವಾಗಿದ್ದು, ಆರ್ಥಿಕ ಅಭಿವೃದ್ಧಿಯಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳು ಪ್ರಮುಖ ಪಾತ್ರ ವಹಿಸುತ್ತದೆ. ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಜಮೀನು ನೀಡುವುದರಿಂದ  ಸಣ್ಣ ಕೈಗಾರಿಕೆಗಳು ಅಭಿವೃದ್ಧಿಯಾಗುವುದರ ಜೊತೆಗೆ ದಕ್ಷಿಣ ಕನ್ನಡದ ಆರ್ಥಿಕ ವ್ಯವಸ್ಥೆಗೆ ಸಹಾಯವಾಗುತ್ತದೆ ಎಂದು ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳು ಸಲಹೆ ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article