
ಶೌಚಾಲಯದಲ್ಲಿ ಲಭಿಸಿದ ಶಿಶು ಸ್ಥಳೀಯರದ್ದು
ಉಡುಪಿ: ಮಲ್ಪೆ ಜಂಕ್ಷನ್ ಬಳಿಯ ಜಾಮೀಯಾ ಮಸೀದಿಯ ಶೌಚಾಲಯದಲ್ಲಿ ಲಭಿಸಿರುವ ನವಜಾತ ಶಿಶು ಸ್ಥಳೀಯ ಯುವತಿಯದ್ದು ಎಂದು ಎಸ್‌ಪಿ ಡಾ.ಅರುಣ್ ಕುಮಾರ್ ಬುಧವಾರ ತಿಳಿಸಿದ್ದಾರೆ.
ಮಸೀದಿ ಕಟ್ಟಡದಲ್ಲಿರುವ ಕೆಲಸಗಾರರಿಗಾಗಿರುವ ಶೌಚಾಲಯದಲ್ಲಿ ಏ. ೧೪ರಂದು ನವಜಾತ ಶಿಶು ಲಭಿಸಿದ್ದು, ಶೌಚಾಲಯದ ಒಳಗಿನ ಗೋಡೆಯ ಮೇಲೆ ರಕ್ತದ ಕಲೆ ಕಂಡುಬಂದಿತ್ತು. ಈ ಬಗ್ಗೆ ಮಲ್ಪೆ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಈ ಶಿಶು ಸ್ಥಳೀಯರಾದ ಆಫ್ರಿನಾ ಎಂಬವರದ್ದಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಆಫ್ರಿನಾ ಅವರಿಗೆ ಒಂದು ಮಗು ಇದ್ದು, ಇನ್ನೊಂದು 7-8 ತಿಂಗಳ ಗರ್ಭವನ್ನು, ಗರ್ಭಪಾತ ಮಾಡಿಸಿಕೊಳ್ಳಲು ಯಾವುದೇ ವೈದ್ಯಕೀಯ ನೆರವು ಪಡೆದುಕೊಳ್ಳದೆ ಸ್ವತಃ ಪ್ರಯತ್ನಿಸಿದ್ದು, ಆಗ ತೀವ್ರ ಹೊಟ್ಟೆನೋವಿನಿಂದ ಬಳಲಿ ಅಲ್ಲಿಯೇ ಇರುವ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ, ಅದನ್ನು ಅಲ್ಲಿಯೇ ಬಿಟ್ಟು ತೆರಳಿರುವುದಾಗಿ ಆಕೆ ಸ್ವ ಇಚ್ಛಾ ಹೇಳಿಕೆಯಲ್ಲಿ ತಿಳಿದ್ದಾರೆ. ಪ್ರಸ್ತುತ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ನಂತರ ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮಗು ಬೇರೆಯವರದ್ದೆಂದು ಹೇಳುವ ಕೆಲವೊಂದು ಅನುಮಾನಾಸ್ಪದ ಆಡಿಯೋಗಳು ಹರಿದಾಡುತ್ತಿದ್ದು, ಯಾರೂ ಸುಳ್ಳು ಸುದ್ದಿ ಹಬ್ಬಿಸಬಾರದು. ಆ ರೀತಿ ವರ್ತಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಅರುಣ್ ಎಚ್ಚರಿಸಿದ್ದಾರೆ.