
ಗುರುವಾಯನಕೆರೆಯಲ್ಲಿ ಟ್ರಾಫಿಕ್ ಜಾಮ್: ವಾಹನಗಳ ಪರದಾಟ
ಉಜಿರೆ: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಗುರುವಾಯನಕೆರೆಯಲ್ಲಿ ಬುಧವಾರ ಮಧ್ಯಾಹ್ನ ಸುಮಾರು ಎರಡು ತಾಸಿಗಿಂತ ಅಧಿಕ ಕಾಲ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಟ ನಡೆಸಿದರು.
ಅಕ್ಷಯ ತೃತೀಯ ದಿನ ವಿಶೇಷದ ಆಭರಣ ಖರೀದಿ, ಅಲ್ಲಲ್ಲಿ ಮದುವೆ, ಮುಂಜಿ ಶುಭ ಸಮಾರಂಭಗಳು, ರಸ್ತೆ ಬದಿಯ ಕಲ್ಯಾಣಮಂಟಪಗಳಲ್ಲಿ ಬಿಡುವಿಲ್ಲದ ಕಾರ್ಯಕ್ರಮಗಳ ಒತ್ತಡ, ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್, ರಜಾ ದಿನವಾದ ಕಾರಣ ಧರ್ಮಸ್ಥಳಕ್ಕೆ ಹೆಚ್ಚಿನ ಪ್ರವಾಸಿ ವಾಹನಗಳ ಓಡಾಟ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಇತ್ಯಾದಿ ಟ್ರಾಫಿಕ್ ಜಾಮ್‌ಗೆ ಕಾರಣವಾಯಿತು.
ಗುರುವಾಯನಕೆರೆಯಿಂದ ಮದ್ದಡ್ಕದವರೆಗೆ, ಗುರುವಾಯನ ಕೆರೆಯಿಂದ ಬೆಳ್ತಂಗಡಿಯ ಹಳೆಕೋಟೆ ತನಕ ಹಾಗೂ ಕಾರ್ಕಳ ರಸ್ತೆಯ ಒಟ್ಟು ಸುಮಾರು 5 ಕಿ.ಮೀ. ವ್ಯಾಪ್ತಿಯಲ್ಲಿ ವಾಹನಗಳು ಮೂರು ಸಾಲುಗಳಲ್ಲಿ ಸಾಲುಗಟ್ಟಿ ಸಾಗುತ್ತಿದ್ದವು, ಒಂದೆಡೆ ಮಧ್ಯಾಹ್ನದ ಬಿರು ಬಿಸಿಲಿನ ವಾತಾವರಣ ವಾಹನ ಸವಾರರನ್ನು ಹೈರಾಣಗಿಸಿತು.
ಸ್ಥಳೀಯರು, ವಾಹನ ಸವಾರರು, ಪೊಲೀಸರು ಕಾರ್ಯಾಚರಣೆ ನಡೆಸಿ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಹರಸಾಹಸ ಪಡುತ್ತಿದ್ದರು. ಮಧ್ಯಾಹ್ನ 12.30ರ ಸುಮಾರಿಗೆ ಆರಂಭವಾದ ಟ್ರಾಫಿಕ್ ಜಾಮ್ ಮಧ್ಯಾಹ್ನ 4 ಗಂಟೆವರೆಗೂ ಮುಂದುವರಿಯಿತು.
ಮುಂದುವರಿದ ಗಾಳಿ, ಮಳೆ:
ಬೆಳ್ತಂಗಡಿ ತಾಲೂಕಿನ ಹೆಚ್ಚಿನ ಭಾಗಗಳಲ್ಲಿ ಬುಧವಾರ ಮಧ್ಯಾಹ್ನದ ಬಳಿಕ ಗಾಳಿ, ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿದಿದೆ. ಮಂಗಳವಾರವು ತಾಲೂಕಿನ ಹಲವು ಭಾಗಗಳಲ್ಲಿ ಮಳೆಯಾಗಿತ್ತು.
ಉಜಿರೆಯ ಕಾಲೇಜು ರಸ್ತೆಯಲ್ಲಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿತ್ತು. ಮರವು ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಪರಿಣಾಮ ಬೈಕಿಗೆ ಸಂಪೂರ್ಣ ಹಾನಿಯಾಗಿದ್ದು, ಬೈಕ್ ಸವಾರ ನೀರಚಿಲುಮೆಯ ಅಮಿತ್ ಎಂಬವರು ಪವಾಡ ಸದೃಶವಾಗಿ ಯಾವುದೇ ರೀತಿಯ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಮೆಸ್ಕಾಂನವರು ಮರಗಳ ಗೆಲ್ಲುಗಳನ್ನು ಅವೈಜ್ಞಾನಿಕವಾಗಿ ಕತ್ತರಿಸಿದ್ದು ಮರಗಳು ಉರುಳಲು ಕಾರಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಲಾಯಿಲದ ಪುತ್ರ ಬೈಲಿನಲ್ಲಿ ವನಿತಾ ಶೆಟ್ಟಿ ಎಂಬವರ ಮನೆಗೆ ತೆಂಗಿನ ಮರ ಬಿದ್ದು, ಛಾವಣಿಗೆ ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿದೆ. ಉಜಿರೆಯ ಮೆಸ್ಕಾಂ ಉಪ ವಿಭಾಗದಲ್ಲಿ 10ಕ್ಕಿಂತ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದಲ್ಲಿ 5 ವಿದ್ಯುತ್ ಕಂಬ ಮುರಿದುಬಿದ್ದ ಮಾಹಿತಿ ಲಭಿಸಿದ್ದು ಇನ್ನಷ್ಟು ವಿದ್ಯುತ್ ಕಂಬಗಳು ಮುರಿದು ಬಿದ್ದ ವರದಿಗಳು ಬರುತ್ತಿವೆ.