
ಕೋಟದಲ್ಲಿ ಮೇ 2-4: ಹಲಸು, ಮಾವು ಕೃಷಿ ಮೇಳ
ಕುಂದಾಪುರ: ಸಂಸ್ಕೃತಿ ಸಂಭ್ರಮ ಟ್ರಸ್ಟ್ ಕೋಟ ಆಶ್ರಯದಲ್ಲಿ, ಕೋಟ ವಿಧಾತ್ರಿ ರೈತ ಉತ್ಪಾದಕರ ಸಂಸ್ಥೆ, ಕೋಟ ಸಹಕಾರಿ ವ್ಯವಸಾಯಿಕ ಸಂಘ, ಗೀತಾನಂದ ಫೌಂಡೇಶನ್ (ರಿ)ಮಣೂರು ಪಡುಕರೆ ಇವುಗಳ ಸಹಭಾಗಿತ್ವ ಹಾಗೂ ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರ, ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಶ್ರಯದಲ್ಲಿ ಕೋಟದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಹಲಸು, ಮಾವು, ಕೃಷಿಮೇಳ ಮೇ.2ರಿಂದ 4ರವರೆಗೆ ಜರುಗಲಿದೆ ಎಂದು ಸಂಸ್ಕೃತಿ ಸಂಭ್ರಮ ಟ್ರಸ್ಟಿನ ಪ್ರಮುಖ ಸತೀಶ್ ಕುಮಾರ್ ಕುಂದಾಪುರ ಹೇಳಿದರು.
ಕೋಟದಲ್ಲಿ ಈ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮೇಳದ ವಿವರಗಳನ್ನು ತಿಳಿಸಿದರು.
ಮೇ 2ರಂದು ಸಂಜೆ 4 ಗಂಟೆಗೆ ಮೇಳದ ಉದ್ಘಾಟನೆ ನಡೆಯಲಿದ್ದು, ಶಾಸಕ ಕಿರಣ್ ಕೊಡ್ಗಿ ಉದ್ಘಾಟಿಸಲಿದ್ದಾರೆ. ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಸ್ಟಾಲ್‌ಗೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭ ಸ್ಥಳೀಯ ಸಂಘ ಸಂಸ್ಥೆಗಳಾದ ಟ್ರಾವೆಲ್ ಲಿಂಕ್ಸ್, ಪಂಚವರ್ಣ, ವರುಣತೀರ್ಥ ವೇದಿಕೆ ಸಂಸ್ಥೆಗಳನ್ನು ಗೌರವಿಸಲಾಗುವುದು.
ಮೇಳದ ಪ್ರಯುಕ್ತ ವಿವಿಧ ತಳಿಯ ಹಲಸು, ಮಾವಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ, ಹಲಸು ಮತ್ತು ಮಾವಿನ ಉಪ ಉತ್ಪನ್ನಗಳ ಮಳಿಗೆ, ವಿವಿಧ ತಳಿಯ ಹಲಸು ಮತ್ತು ಮಾವಿನ ಗಿಡ ಹಾಗೂ ಇತರ ಹಣ್ಣಿನ, ಹೂವಿನ, ತರಕಾರಿ ಬೀಜದ ಮಳಿಗೆಗಳನ್ನು ತೆರೆಯಲಾಗುವುದು, ಕೃಷಿ ಮಾಹಿತಿ ಕಾರ್ಯಾಗಾರ, ಕರಕುಶಲ ಮತ್ತು ನೇಯಿಗೆಯ ಬಟ್ಟೆ ಮಳಿಗೆ, ಇತರ ಗೃಹೋಪಯೋಗಿ ವಸ್ತುಗಳ ಮಳಿಗೆಯನ್ನು ಸಹ ತೆರೆಯಲಾಗುವುದು ಎಂದರು.
ಮೇ 3ರಂದು ರೈತರ ಏಕತೆ ಕೇಂದ್ರ ಉದ್ಘಾಟನೆ, ಮೇ 4 ರಂದು ಕೃಷಿ ಸಂಭ್ರಮ, ಕೃಷಿಕರಿಗೆ ಸನ್ಮಾನ ನಡೆಯಲಿದೆ. ಮೇ 4 ರಂದು ಸಂಜೆ 5 ಗಂಟೆಗೆ ಸಮಾರೋಪ ನಡೆಯಲಿದೆ ಎಂದರು.
ಸಂಸ್ಕೃತಿ ಸಂಭ್ರಮ ಟ್ರಸ್ಟಿನ ಇಬ್ರಾಹಿಂ ಕೋಟ, ಶ್ರೀಧರ ಮರವಂತೆ, ರಮೇಶ್ ಮೆಂಡನ್ ಮೊದಲಾದವರು ಇದ್ದರು.