
ದ್ವೇಷರಹಿತ ಸಮಾಜಕ್ಕೆ ಬಸವಣ್ಣ ಸಂದೇಶ ಅಗತ್ಯ: ಡಾ. ಕೆ. ಆನಂದ್
ಮಂಗಳೂರು: ಎಲ್ಲರೂ ಸಮಾನರಾಗಿ ಬಾಳಿ ಬದುಕಿ, ಸಂಘರ್ಷರಹಿತ ಮತ್ತು ದ್ವೇಷರಹಿತ ಸಮಾಜ ನಿರ್ಮಾಣಕ್ಕೆ ಬಸವೇಶ್ವರರ ಸಂದೇಶ ಇಂದಿನ ಅಗತ್ಯವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಆನಂದ್ ಹೇಳಿದರು.
ಅವರು ಬುಧವಾರ ತುಳುಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂಖದ ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಸಹಕಾರದೊಂದಿಗೆ ನಡೆದ ಶ್ರೀ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವಣ್ಣನವರ ತತ್ವಗಳು ಸದಾ ನಮ್ಮೊಂದಿಗೆ ಇರಬೇಕು. ಸಾಮಾಜಿಕ ಸಮಾನತೆಯನ್ನು ಅಂದಿನ ಕಾಲದಲ್ಲಿಯೇ ಪ್ರತಿಪಾದಿಸಿದ್ದ ಅವರು, ಮನುಷ್ಯರಲ್ಲಿ ಮೇಲು ಕೀಳು ಎಂಬ ನಿಲುವನ್ನು ಕಠುವಾಗಿ ವಿರೋಧಿಸಿದ್ದರು. ಇದುವೇ ಉತ್ತಮ ಸಮಾಜಕ್ಕೆ ಬುನಾಧಿಯಾಯಿತು ಎಂದರು.
ಬಸವಣ್ಣನವರು ಸಂಸ್ಥಾಪಿಸಿದ್ದ ಅನುಭವ ಮಂಟಪವು ಜಗತ್ತಿನ ಮೊದಲ ಸಂಸತ್ ಎಂದೇ ಪ್ರಸಿದ್ಧಿಯಾಗಿದೆ. ಇದು ಸಂಸದೀಯ ವ್ಯವಸ್ಥೆಗೆ ದೊಡ್ಡ ಕೊಡುಗೆ ನೀಡಿತು. ಶ್ರಮ ಮತ್ತು ಸೇವೆಯ ಮೇಲೆ ಅಪಾರ ನಂಬಿಕೆ ಇಟ್ಟಿದ್ದ ಅವರು, ಸಮಾಜದ ಪ್ರಗತಿಗೆ ಇದು ಪ್ರಮುಖ ಆಧಾರ ಎಂದು ಪ್ರತಿಪಾದಿಸಿದ್ದರು ಎಂದು ಜಿ.ಪಂ. ಸಿಇಓ ತಿಳಿಸಿದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ ಅವರು ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಪ್ರಾಂಶುಪಾಲ ಡಾ. ಪೂವಪ್ಪ ಕಣಿಯೂರು ಅವರು ಉಪನ್ಯಾಸ ನೀಡಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ, ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಎಸ್. ಗುರುಮೂರ್ತಿ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿ, ರೇಣುಕಾ ಕಣಿಯೂರು ನಿರೂಪಿಸಿದರು.