ಎ.29 ರಂದು ದೇರಳಕಟ್ಟೆ ಜಂಕ್ಷನ್‌ನಲ್ಲಿ ಹಕ್ಕೊತ್ತಾಯ ಸಮಾವೇಶ

ಎ.29 ರಂದು ದೇರಳಕಟ್ಟೆ ಜಂಕ್ಷನ್‌ನಲ್ಲಿ ಹಕ್ಕೊತ್ತಾಯ ಸಮಾವೇಶ


ಉಳ್ಳಾಲ: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಹಾಗೂ ಜನರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಎಪ್ರಿಲ್ 29ರಂದು ಬೆಳಗ್ಗೆ 10.30ಕ್ಕೆ ದೇರಳಕಟ್ಟೆ ಜಂಕ್ಷನ್‌ನಲ್ಲಿ ಸಿಪಿಎಂ ಉಳ್ಳಾಲ ವಲಯ ಸಮಿತಿ ವತಿಯಿಂದ ಹಕ್ಕೊತ್ತಾಯ ಸಮಾವೇಶವು ಜರುಗಲಿದೆ. 

ಈ ಸಮಾವೇಶವನ್ನು ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಉದ್ಘಾಟಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯಾದವ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಸಿಪಿಎಂ ಉಳ್ಳಾಲ ವಲಯ ಸಮಿತಿ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪತ್ರಿಕಾಗೋಷ್ಠಿಯಲ್ಲಿ  ತಿಳಿಸಿದರು.

ಸಮಾವೇಶದ ಪೂರ್ವಭಾವಿಯಾಗಿ ಏ.29 ರಂದು ಬೆಳಗ್ಗೆ 10ಕ್ಕೆ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆ ಜಂಕ್ಷನ್ ಹಾಗೂ ನಾಟಿಕಲ್ ಜಂಕ್ಷನ್‌ನಿಂದ ಎರಡು ಬೃಹತ್ ರ್ಯಾಲಿಗಳು ಹೊರಡಲಿದೆ ಎಂದು ಹೇಳಿದರು.

ಉಳ್ಳಾಲ ತಾಲೂಕು ರಚನೆಯಾಗಿ ಐದು ವರ್ಷವಾದರೂ ಪ್ರಮುಖವಾಗಿ ಬೇಕಾದ ಸುಸಜ್ಜಿತವಾದ ಮಿನಿ ವಿಧಾನಸೌಧ, ಸಬ್‌ರಿಜಿಸ್ಟ್ರಾರ್ ಕಚೇರಿ, ತಾಲೂಕು ಕಟ್ಟಡ ಕ್ರೀಡಾಂಗಣ, ವ್ಯವಸ್ಥಿತ ರಂಗ ಮಂದಿರ, ಪುರಭವನ, ತಾಲೂಕು ನ್ಯಾಯಾಲಯದ ವ್ಯವಸ್ಥೆ ಆಗಬೇಕು ಎಂಬ ಬೇಡಿಕೆ ಇಡಲಾಗಿದೆ ಎಂದು ಹೇಳಿದರು.

ಹಕ್ಕೊತ್ತಾಯದ ಸಮಾವೇಶ ಸಂದೇಶವನ್ನು ಮನೆಮನೆಗೆ ತಲುಪಿಸಲು ಈಗಾಗಲೇ 150ರಷ್ಟು ತಂಡಗಳು ರಚಿಸಲಾಗಿದ್ದು, ಎರಡು ದಿನಗಳ ಕಾಲ ಉಳ್ಳಾಲ ತಾಲೂಕಿನಾದ್ಯಂತ ವಾಹನ ಪ್ರಚಾರ ಜಾಥಾ ನಡೆಯಲಿದೆ. ಎಪ್ರಿಲ್ 21ರಂದು ಬೆಳಿಗ್ಗೆ 9.30ಕ್ಕೆ ಮುಡಿಪು ಜಂಕ್ಷನ್‌ನಲ್ಲಿ ಈ ಜಾಥಾವನ್ನು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಉದ್ಘಾಟಿಸಲಿದ್ದು, ಸಂಜೆ 6 ಗಂಟೆಗೆ ಹರೇಕಳ ಕಡವಿನ ಬಳಿಯಲ್ಲಿ ಸಮಾರೋಪ ನಡೆಯಲಿದೆ. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ. ಕೃಷ್ಣಪ್ಪ ಕೊಂಚಾಡಿ ಸಮಾರೋಪ ಭಾಷಣ ಮಾಡಲಿದ್ದಾರೆ.

ಏ.22 ರಂದು ಬೆಳಗ್ಗೆ 9.30ಕ್ಕೆ ಕುತ್ತಾರ್ ಜಂಕ್ಷನ್‌ನಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ. ಯಾದವ ಶೆಟ್ಟಿಯವರು ಉದ್ಘಾಟಿಸಲಿದ್ದು, ಸಂಜೆ 5.30ಕ್ಕೆ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಸಂತೋಷ್ ಬಜಾಲ್ ಸಮಾರೋಪ ಭಾಷಣ ಮಾಡಲಿದ್ದಾರೆ. ಎರಡು ದಿನಗಳ ಕಾಲ ಸುಮಾರು ೨೫ರಷ್ಟು ಸ್ಥಳಗಳಲ್ಲಿ ಜಾಥಾ ಕಾರ್ಯಕ್ರಮವು ಜರುಗಲಿದ್ದು, ಪಕ್ಷದ ಜಿಲ್ಲಾ ನಾಯಕರಾದ ಬಿ.ಎಂ. ಭಟ್, ಜಯಂತಿ ಶೆಟ್ಟಿ, ಬಿ.ಕೆ. ಇಮ್ಮಿಯಾಝ್, ಯೋಗೀಶ್ ಜಪ್ಪಿನಮೊಗರು, ಮನೋಜ್ ವಾಮಂಜೂರು, ಜೆ. ಬಾಲಕೃಷ್ಣ ಶೆಟ್ಟಿ, ಈಶ್ವರೀ ಬೆಳ್ತಂಗಡಿಯವರು ಪ್ರಮುಖ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುಕುಮಾರ್ ತೊಕ್ಕೊಟ್ಟು, ಹಿರಿಯ ನಾಯಕ ಕೃಷ್ಣಪ್ಪ ಸಾಲ್ಯಾನ್ ಮುಡಿಪು ವಲಯ ಕಾರ್ಯದರ್ಶಿ ರಫೀಕ್ ಹರೇಕಳ, ದ.ಕ. ಜಿಲ್ಲಾ ಸಮಿತಿ ಸದಸ್ಯರಾದ ಶೇಖರ್ ಕುಂದರ್, ಮುಡಿಪು ವಲಯ ಸಮಿತಿ ಸದಸ್ಯರಿಝಾನ್ ಹರೇಕಳ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article