
ಕುಡುಪು ಗುಂಪು ಹತ್ಯೆ ಪ್ರಕರಣ: ಗೃಹಸಚಿವರ ಕ್ಷಮೆ ಯಾಚನೆ, ನೈಜ ಆರೋಪಿಗಳ ಬಂಧನಕ್ಕೆ ಆಗ್ರಹ
ಉಳ್ಳಾಲ: ಕುಡುಪು ಗುಂಪು ಹತ್ಯೆ ನಡೆದ ಯುವಕ ಅಖಿಲ ಭಾರತ ಕಾಂಗ್ರೆಸ್‌ನ ಪ್ರಿಯಾಂಕ ಗಾಂಧಿಯವರ ವಯನಾಡ್ ಕ್ಷೇತ್ರದವನಾಗಿದ್ದು, ಅವರು ಹೆಚ್ಚಿನ ಮುತುವರ್ಜಿ ವಹಿಸಿ ಹೆಚ್ಚುವರಿ ತನಿಖೆಗೆ ಒತ್ತಾಯಿಸಬೇಕಿದೆ. ಕರ್ನಾಟಕ ಸರಕಾರ ಮೃತರ ಕುಟುಂಬಕ್ಕೆ ಪರಿಹಾರ ಒದಗಿಸಬೇಕಿದ್ದು, ಅಮಾನವೀಯ ಘಟನೆಯನ್ನು ಸಂಯುಕ್ತ ನಾಗರಿಕ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದು ಸಂಯುಕ್ತ ನಾಗರಿಕ ವೇದಿಕೆ ಉಳ್ಳಾಲ ತಾಲೂಕು ಅಧ್ಯಕ್ಷ ಯು.ಅಬ್ದುಲ್ ಸಲಾಂ ಒತ್ತಾಯಿಸಿದ್ದಾರೆ.
ತೊಕ್ಕೊಟ್ಟು ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಗುಂಪು ಹತ್ಯೆ ಉಡುಪಿ-ಮಂಗಳೂರು ಜನತೆಗೆ ನಾಚಿಕೆಗೇಡಿನ ಸಂಗತಿ. ಮಾನವೀಯತೆ ಇಲ್ಲದವರಿಂದ ಈ ಕೃತ್ಯ ನಡೆದಿದೆ. ನಾಯಿಗಳು ಜಗಳ ಆಡುವಾಗಲೂ ಅದರೊಳಗೆ ಬಿಡಿಸುವ ನಿಯತ್ತಿದೆ. ಆದರೆ ಕುಡುಪು ಯುವಕರಲ್ಲಿ ಇರದೇ ಇರುವುದು ನಾಚಿಕೆಗೇಡು. ಜಿಲ್ಲೆಯಲ್ಲಿ ನ್ಯಾಯಾಲಯದ ತೀರ್ಮಾನಕ್ಕಿಂತ ಸ್ವಯಂಘೋಷಿತ ತೀರ್ಮಾನಗಳನ್ನು ನೀಡುವ ಹುನ್ನಾರಗಳು ನಡೆಯುತ್ತಿದೆ. ತಕ್ಷಣವೇ ನೈಜ ಆರೋಪಿಗಳೆಲ್ಲರನ್ನೂ ಬಂಧಿಸಿ ಸೂಕ್ತ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಪ್ರ. ಕಾರ್ಯದರ್ಶಿ ಸಲಾಂ ಉಚ್ಚಿಲ್ ಮಾತನಾಡಿ, ರಾಜಕೀಯ ಪ್ರೇರಿತವಾಗಿ ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ಮಾಡಬಾರದು. ಅಮಾಯಕರನ್ನು ಬಂಧಿಸದೇ ಕೃತ್ಯದ ಪ್ರಮುಖ ಆರೋಪಿಯ ಬಂಧನವಾಗಬೇಕು. ಪ್ರಕರಣ ಕುರಿತು ಬಾಲಿಶತನದ ಹೇಳಿಕೆ ನೀಡಿದ ರಾಜ್ಯ ಗೃಹಮಂತ್ರಿ ರಾಜ್ಯದ ಜನತೆಯ ಕ್ಷಮೆಯಾಚಿಸಿ ಹೇಳಿಕೆಯನ್ನು ಹಿಂಪಡೆಯಬೇಕು. ಮೃತ ಯುವಕ ವಯನಾಡಿನ ಪುಲ್ಪಲ್ಲಿ ನಿವಾಸಿ ಅಶ್ರಫ್ ಎಂದು ಗುರುತಿಸಲಾಗಿದೆ. ಹತ್ಯೆಗೆ ಸಂಬಂಧಿಸಿದ ವೀಡಿಯೋಗಳನ್ನು ವಶಪಡಿಸಿ ನೈಜ ಆರೋಪಿ ಹಾಗೂ ಬಿಜೆಪಿ ಮುಖಂಡ ರವೀಂದ್ರ ಎಂಬಾತನ ಬಂಧಿಸಬೇಕು ಎಂದು ಸಂಯುಕ್ತ ನಾಗರಿಕ ವೇದಿಕೆ ಆಗ್ರಹಿಸುತ್ತದೆ ಎಂದರು.
ಕಾರ್ಯದರ್ಶಿ ಹಿದಾಯತುಲ್ಲಾ ಮಾತನಾಡಿ, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕಾಂಗ್ರೆಸ್ ಪಕ್ಷವನ್ನು ಜನ ಚುನಾಯಿಸಿದರು. ಆದರೆ ಗೃಹಮಂತ್ರಿಗಳ ಹೇಳಿಕೆಯೇ ನಾಚಿಕೆಗೇಡು, ಸತ್ಯಾಸತ್ಯತೆ ತಿಳಿಯುವ ಮೊದಲೇ ಹೇಳಿಕೆಯನ್ನು ನೀಡುತ್ತಾರೆ. ಥಳಿಸಿ ಕೊಂದಿದ್ದನ್ನು ಸಮರ್ಥನೆ ಮಾಡುತ್ತಾರೆಂದಾದಲ್ಲಿ, ಜಿಲ್ಲೆಯಲ್ಲಿ ಹಿಂದುತ್ವದ ಸ್ವಯಂಘೋಷಿತ ನಾಯಕರು ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುತ್ತಾ ಬಂದರೂ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ. ರಾಜ್ಯ ಸರಕಾರ ಜಿಲ್ಲೆಯ ಶಾಂತಿಯ ಕಾಪಾಡುವತ್ತ ಗಮನಹರಿಸಲಿ ಎಂದರು.
ಸಂಚಾಲಕ ಇರ್ಷಾದ್ ಅಜ್ಜಿನಡ್ಕ ಮಾತನಾಡಿ, ಯುವಕನ ಹತ್ಯಾ ನಂತರ ಆತನಿಗೆ ಸಂಬಂಧಿಸಿದ ಮೊಬೈಲ್, ಆಧಾರ್ ಕಾರ್ಡ್, ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಮರೆಮಾಚಿಸಲಾಗಿದೆ. ಸಾಕ್ಷರತೆಯ ಜಿಲ್ಲೆಯಲ್ಲಿ ಉತ್ತರಭಾರತದಂತಹ ಘಟನೆ ನಡೆಯುತ್ತಿರುವುದು ಖಂಡನೀಯ. ಪ್ರಕರಣದಲ್ಲಿ ಒಟ್ಟು 30 ಆರೋಪಿಗಳಿದ್ದಾರೆ, ಪ್ರಮುಖ ಆರೋಪಿ ಮಾಜಿ ಕಾರ್ಪೊರೇಟರ್ ಪತಿ ಆಗಿದ್ದಾನೆ. ಹಲವರು ಈಗಲೂ ಮನೆಯಲ್ಲೇ ಇದ್ದಾರೆ. ಎಲ್ಲರನ್ನೂ ಬಂಧಿಸಿ ಮೃತ ಯುವಕನಿಗೆ ನ್ಯಾಯ ದೊರಕಿಸಿಕೊಡಬೇಕಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಗುಂಪು ಹತ್ಯೆ ಪ್ರಕರಣ ನ್ಯಾಯಾಲಯದಲ್ಲಿ ಸಾಕ್ಷಿ ಕೊರತೆಯಿಂದ ಬಿದ್ದು ಹೋಗುತ್ತದೆ ಅನ್ನುವ ಧೈರ್ಯದಿಂದ ಕೃತ್ಯ ಎಸಗಿದ್ದಾರೆ ಎಂದರು.