
ಹಿಂದು ಕಾರ್ಯಕರ್ತರ ಹತ್ಯೆ ಕಾಂಗ್ರೆಸ್ ಗ್ಯಾರಂಟಿ: ಆರ್. ಅಶೋಕ್ ಆರೋಪ
ಬಂಟ್ವಾಳ: ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರೆ ಹಿಂದೂ ಕಾರ್ಯಕರ್ತರ ಹತ್ಯೆಗಳು ಗ್ಯಾರಂಟಿ, ಅದು ಕಾಂಗ್ರೆಸ್ ಗ್ಯಾರಂಟಿ ಎಂದು ವಿಧಾನಸಭೆಯ ವಿಪಕ್ಷ ಪಕ್ಷದ ನಾಯಕ ಆರ್. ಆಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಬಜಪೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಸುಹಾಸ್ ಶೆಟ್ಟಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸಿದ್ದರಾಮಯ್ಯರವರು 2013ರಲ್ಲಿ ಅಧಿಕಾರದಲ್ಲಿದ್ದಾಗ 36 ಮಂದಿ ಹಿಂದೂ ಕಾರ್ಯಕರ್ತರ ಹತ್ಯೆಯಾಗಿತ್ತು, ಹತ್ಯೆ ಮಾಡಿದವರೆಲ್ಲರೂ ನಿಷೇಧಿತ ಪಿ.ಎಫ್.ಐ. ಕೆ.ಎಪ್.ಡಿ ಸಂಘಟನೆಯವರು, ಸುಹಾಸ್ ಶೆಟ್ಟಿ ಅವರನ್ನು ಕೊಲೆ ಮಾಡಿರುವವರು ಕೂಡ ಜಿಹಾದಿ ಬ್ರದರ್‌ಗಳು ಎಂದು ಅವರು ಆರೋಪಿಸಿದರು. ಮಂಗಳೂರಿಗೆ ಬರುವುದಕ್ಕಿಂತ ಮುನ್ನ ಘಟನೆಯ ಬಗ್ಗೆ ದ.ಕ.ಜಿಲ್ಲಾ ಪೊಲೀಸ್ ಕಮೀಷನರ್‌ರೊಂದಿಗೆ ಮಾತನಾಡಿದ್ದು, ಘಟನೆ ನಡೆದು 24 ಗಂಟೆ ಕಳೆದರೂ ಆರೋಪಿಗಳನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದಾಗ ಪೊಲೀಸ್ ತಂಡವನ್ನು ರಚಿಸಿದ್ದೆವೆ ಎಂದು ಉತ್ತರಿಸಿದ್ದಾರೆ ಎಂದರು.
ದ.ಕ. ಜಿಲ್ಲೆಯಲ್ಲಿ ಯಾರು ಕೊಲೆ ಮಾಡಿದ್ದಾರಾ? ಅವರನ್ನು ಬಂಧಿಸುವುದಿಲ್ಲ, ಇಲ್ಲಿ ಎರಡು ಟೀಮ್ ಇದ್ದು, ಮರ್ಡರ್ ಮಾಡಲು ಒಂದು ಟೀಮ್ ಜೈಲಿಗೆ ಹೋಗಲು ಇನ್ನೊಂದು ಟೀಮ್ ಇದು ಪೊಲೀಸ್ ಇಲಾಖೆಯ ಕಾರ್ಯವೈಖರಿಯಾಗಿದೆ ಎಂದು ಹೇಳಿದ ಆರ್ ಅಶೋಕ್ ಜೈಲಿಗೆ ಹೋಗುವ ಟೀಮ್ ರೆಡಿಯಾಗಲು ಕಾಲಾವಕಾಶವನ್ನು ಪೊಲೀಸ್ ಇಲಾಖೆ ನೀಡಿರಬೇಕು ಎಂದು ಅವರು ಆರೋಪಿಸಿದ ಅವರು ಆ ಟೀಮ್‌ನ ಪಟ್ಟಿ ಕೊಟ್ಟ ಬಳಿಕ ಆರೆಸ್ಟ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಎಷ್ಟು ಈ ರೀತಿ ಮಾಡುತ್ತೀರಾ ಎಂದು ಪೊಲೀಸ್ ಇಲಾಖಾಧಿಕಾರಿಗಳನ್ನು ಪ್ರಶ್ನಿಸಿದರು.
ಸುಹಾಸ್ ಶೆಟ್ಟಿಗೆ ಬೆದರಿಕೆ ಇರುವ ಬಗ್ಗೆ ಮಾಹಿತಿ ಇದ್ದರೂ ಕೂಡ ಪೊಲೀಸ್ ಇಲಾಖೆ ಯಾಕೆ ಭದ್ರತೆ ನೀಡಿಲ್ಲ, ಇದು ಪೊಲೀಸ್ ಇಲಾಖೆ ವೈಪಲ್ಯ ಸ್ಪಷ್ಟವಾಗಿದೆ ಕರ್ನಾಟಕದಲ್ಲಿ ಪೊಲೀಸ್ ಇದ್ದಾರಾ? ಇಲ್ಲವಾ? ಎಂಬ ಪ್ರಶ್ನೆ ಮೂಡಿದೆ ಎಂದರು.
ಒಂದು ಕಡೆಯಿಂದ ಪೊಲೀಸ್ ಅಧಿಕಾರಿಯ ಮೇಲೆಯೇ ಸಿ.ಎಂ. ಸಿದ್ದರಾಮಯ್ಯ ಅವರಿಂದ ಕಪಾಳಮೋಕ್ಷ ಆಗುತ್ತದೆ. ಪಾಕಿಸ್ಥಾನ ಜಿಂದಾಬಾದ್ ಹೇಳುವ ಭಯೋತ್ಪಾದಕರಿಂದಲೇ ಜಿಲ್ಲೆಯಲ್ಲಿ ಕೊಲೆಗಳು ನಡೆಯುತ್ತಿದ್ದು, ಇಲ್ಲಿನ ಪೊಲೀಸ್ ಇಲಾಖಾ ಮೇಲಿನ ವಿಶ್ವಾಸ ಹೊರಟು ಹೋಗಿದೆ, ಈ ಘಟನೆ ಎನ್.ಐ.ಎ.ಯಿಂದಲೇ ತನಿಖೆ ನಡೆಸಿ ಕೃತ್ಯದ ಮೂಲ ಪತ್ತೆಹಚ್ಚಬೇಕು ಎಂದು ಆರ್. ಅಶೋಕ್ ಒತ್ತಾಯಿಸಿದರು.
ಸಿ.ಎಂ. ಸಿದ್ದರಾಮಯ್ಯ ಆವರ ಓಲೈಕೆ ರಾಜಕಾರಣದ ಫಲವಾಗಿ ಪಿಎಫ್‌ಐ ಸಂಘಟನೆಗೆ ಸೇರಿದ ಆರೋಪಿಗಳ ಕೇಸ್ ಹಿಂಪಡೆಯಲಾಗುತ್ತದೆ. ಅಂತಹ ಭಯೋತ್ಪಾದಕರಿಂದ ಮತ್ತೆ,ಮತ್ತೆ ಹತ್ಯೆಗಳು ನಡೆಯುತ್ತವೆ, ಇದೇ ಧೈರ್ಯ ದಿಂದಲೇ ಕೊಲೆಗಳು ಮರುಕಳಿಸುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಂಬುದೇ ಮರಿಚಿಕೆಯಾಗಿದೆ ಎಂದು ಆರೋಪಿಸಿದರು.
ಭಯೋತ್ಪಾದನೆಗೆ ನಿರ್ಮೂಲನೆ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಎನ್.ಐ.ಎ ಸೆಂಟರ್ ತೆರೆಯುವ ನಿಟ್ಟಿನಲ್ಲಿ ಕೇಂದ್ರ ಸಚಿವರನ್ನು ಒತ್ತಾಯಿಸಲಾಗುವುದು ಎಂದರು.