
ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಬಂದ್: ಹಿಂದೂ ಸಂಘಟನೆಯ ಕಾಯ೯ಕತ೯ರಿಂದ ಗೋಳಿಬಜೆ ಸೆಂಟರ್‌ಗೆ ಹಾನಿ
Friday, May 2, 2025
ಮೂಡುಬಿದಿರೆ: ಹಿಂದೂ ಕಾರ್ಯಕರ್ತ, ರೌಡಿ ಶೀಟರ್ ಮಂಗಳೂರ್ ಬಜ್ಪೆ ಸುಹಾಸ್ ಶೆಟ್ಟಿಯ ಕೊಲೆಯನ್ನು ಖಂಡಿಸಿ ನಡೆದ ಜಿಲ್ಲಾ ಬಂದ್ ಕರೆಗೆ ಸ್ಪಂದಿಸಿ ಮೂಡುಬಿದಿರೆಯಲ್ಲೂ ಅಂಗಡಿಗಳನ್ನು ಬಂದ್ ಮಾಡಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗಿದೆ.
ಕೊಲೆಯನ್ನು ಖಂಡಿಸಿರುವ ಹಿಂದೂ ಸಂಘಟನೆಗಳ ಕಾಯ೯ಕತ೯ರು ರಸ್ತೆ ಮಧ್ಯೆ ಟೈರ್ ಸುಟ್ಟು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸರಕಾರಿ ಬಸ್‌ಗಳನ್ನು ಹೊರತು ಪಡಿಸಿ ಖಾಸಗಿ ಬಸ್‌ಗಳು ಓಡಾಡಿಲ್ಲ.
ಹಿಂದೂ ಸಂಘಟನೆಯ ಕಾಯ೯ಕತ೯ರಿಂದ ‘ಗೋಳಿಬಜೆ’ ಸೆಂಟರ್‌ಗೆ ಹಾನಿ:
ಜೈನ್ ಪೇಟೆ ಬಳಿ ಕಾಯ೯ನಿವ೯ಹಿಸುತ್ತಿದ್ದ ಸುದಾತ್ತ ಜೈನ್ ಅವರಿಗೆ ಸಂಬಂಧಿಸಿದ ‘ಗೋಳಿಬಜೆ’ ಸೆಂಟರ್‌ಗೆ ನುಗ್ಗಿದ ಹಿಂದೂ ಸಂಘಟನೆಯ ಕೆಲ ಯುವಕರು ಬಂದ್ ಮಾಡುವಂತೆ ಹೇಳಿದ್ದಲ್ಲದೆ ಬಾಟ್ಲಿಯಿಂದ ಗ್ಲಾಸ್‌ಗೆ ಹೊಡೆದಿದ್ದು ಆಗ ಗ್ಲಾಸ್‌ನ ಚೂರುಗಳೆಲ್ಲಾ ಬೇಯಿಸಿಟ್ಟಿದ್ದ ಅನ್ನ ಮತ್ತು ಪದಾಥ೯ದ ಮೇಲೆ ಬಿದ್ದಿದೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಅವರು ಸ್ಥಳದಲ್ಲಿ ಜಮಾಯಿಸಿದ್ದ ಯುವಕರನ್ನು ಸ್ಥಳದಿಂದ ಹೋಗುವಂತೆ ಸೂಚಿಸಿದ್ದಾರೆ.
ಸುದಾತ್ತ ಜೈನ್ ಅವರು ‘ತಾನು ಬೇಯಿಸಿಟ್ಟಿರುವ ಆಹಾರವನ್ನು ಆಸ್ಪತ್ರೆಯ ಜನರಿಗೆ ಅಥವಾ ಬೇರೆ ಯಾರಿಗಾದರೂ ಕೊಟ್ಟು ಮುಗಿಸಿ ಬಂದ್ ಮಾಡುವುದಾಗಿ ಹೇಳಿದಾಗಲೂ ಕೇಳದ ಯುವಕರು ಕ್ಯಾಂಟೀನ್‌ಗೆ ಹಾನಿಗೊಳಿಸಿ ಆಹಾರ ಪದಾಥ೯ವನ್ನು ಯಾರೂ ತಿನ್ನದಂತೆ ಮಾಡಿದ್ದಾರೆಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.