
ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಲೇಖನಿ ಎತ್ತಬೇಕಾದ ತುರ್ತಿದೆ: ಉಮರ್ ಯು.ಹೆಚ್.
ಮಂಗಳೂರು: ದ್ವೇಷದ ರಾಜಕಾರಣದಿಂದಾಗಿ ಜನರ ನಡುವೆ ಕಂದರಗಳು ಸೃಷ್ಟಿಯಾಗುತ್ತಿರುವ ಇಂದಿನ ದಿನಗಳಲ್ಲಿ ಲೇಖಕರು ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಲೇಖನಿ ಎತ್ತಬೇಕಾದ ತುರ್ತು ಅಗತ್ಯವಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಹೆಚ್. ಹೇಳಿದರು.
ಅವರು ಬುಧವಾರ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಮಾಡೂರು ಗೋಲ್ಡನ್ ಫ್ರೆಂಡ್ಸ್ ಸಹಯೋಗದಲ್ಲಿ ಕೋಟೆಕಾರಿನ ಬೈತುಲ್ ಈಮಾನ್ ಮನೆಯಲ್ಲಿ ಏರ್ಪಡಿಸಿದ್ದ ‘ಮೊದಲ ಮನೆ-ಮನೆ ಬ್ಯಾರಿ ಕವಿಗೋಷ್ಠಿ’ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಜಕಾರಣಿಗಳು, ಜನ ನಾಯಕರು ಜನರ ನಡುವೆ ಗೊಂದಲ ಮತ್ತು ಅನುಮಾನಗಳಿಗೆ ಎಡೆಮಾಡಿ ಕೊಡುವ ಬಾಲಿಶ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಉಮರ್ ತಿಳಿಸಿದರು.
ಈ ಸಂದರ್ಭದಲ್ಲಿ ವಿ. ಇಬ್ರಾಹಿಂ ನಡುಪದವು, ಫರ್ಹಾನ ಉಳ್ಳಾಲ, ಮನ್ಸೂರ್ ಮೂಲ್ಕಿ (ಹೃದಯ ಕವಿ), ರಮೀಝ ಯಂ.ಬಿ., ಯು.ಕೆ. ಖಾಲಿದ್, ಸಿಹಾನ ಬಿ.ಎಂ., ರಹಿಮಾನ್ ಬೋಳಿಯಾರ್ ಹಾಗೂ ಸಾರ ಮಸ್ಕುರುನ್ನೀಸ ಬ್ಯಾರಿ ಕವನ ಮಂಡಿಸಿದರು.
ಕಾರ್ಯಕ್ರಮದ ಸಂಚಾಲಕ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಹಮೀದ್ ಹಸನ್ ಮಾಡೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಝ್ಮತುನ್ನಿಸ ಲೈಝ್ ಕಿರಾಅತ್ ಪಠಿಸಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಯು.ಹೆಚ್. ಖಾಲಿದ್ ಉಜಿರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾಡೂರು ಗೋಲ್ಡನ್ ಫ್ರೆಂಡ್ಸ್ ಅಧ್ಯಕ್ಷ ರಶೀದ್ ಹಂಝ ಮಾಡೂರು ಉಪಸ್ಥಿತರಿದ್ದರು.