
ಸುಹಾಸ್ ಶೆಟ್ಟಿಗೆ ಹುಟ್ಟೂರ ನುಡಿನಮನ: ಕೊಲೆಯ ತನಿಖೆಯನ್ನು ಎನ್‌ಐಎಗೆ ವಹಿಸಿದಲ್ಲಿ ಎಲ್ಲಾ ಷಡ್ಯಂತ್ರಗಳು ಬಯಲಿಗೆ
ಬಂಟ್ವಾಳ: ಬಜಪೆಯಲ್ಲಿ ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರಿಗೆ ನುಡಿನಮನ ಕಾರ್ಯಕ್ರಮ ಸೋಮವಾರ ಕಾವಳಪಡೂರು ಗ್ರಾಮದ ಮಧ್ವ ಪ್ಯಾಲೇಸ್ ಸಭಾಂಗಣದಲ್ಲಿ ನಡೆಯಿತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ನುಡಿ ನಮನ ಸಲ್ಲಿಸಿ ಮಾತನಾಡಿ, ನೂರಾರು ವರ್ಷಗಳಿಂದ ನಿರಂತರವಾಗಿ ಹಿಂದೂಗಳ ಮೇಲೆ ಆಕ್ರಮಣ ನಡೆಯುತ್ತಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ,ಇದರ ವಿರುದ್ಧ ಹಿಂದೂ ಸಮಾಜ ಸಂಘಟಿತರಾಗಿ ಎದ್ದು ನಿಲ್ಲಬೇಕಾದ ಅನಿವಾರ್ತತೆ ಎದುರಾಗಿದೆ ಎಂದು ಹೇಳಿದರು.
ಹಿಂದೂ ಸಮಾಜದ ಏಳಿಗೆಗಾಗಿ, ಧರ್ಮರಕ್ಷಣೆಗಾಗಿ ಹೋರಾಟದ ಮುಂಚೂಣಿಯಲ್ಲಿದ್ದ ಸುಹಾಸ್ ಅವರ ಬಲಿದಾನವಾಗಿದ್ದು, ಕಾಂಗ್ರೆಸಿಗರು ಸಹಾಸ್‌ಗೆ ರೌಡಿಶೀಟರ್ ಎಂಬ ಹಣೆಪಟ್ಟಕಟ್ಟಿದ್ದಾರೆ. ಸ್ಪೀಕರ್ ಖಾದರ್ ಅವರು ಕೃತ್ಯದ ಆರೋಪಿಯೊಬ್ಬನ ಮನೆಯವರ ಪರ ಹೇಳಿಕೆ ನೀಡುವ ಮೂಲಕ ಕೃತ್ಯದ ತನಿಖೆಯನ್ನೇ ದಾರಿತಪ್ಪಿಸಲು ಪ್ರಯತ್ನಿಸಿದ್ದಾರೆ. ಹಾಗಾಗಿ ಸಹಾಸ್ ಕೊಲೆಯ ತನಿಖೆಯನ್ನು ಎನ್‌ಐಎಗೆ ವಹಿಸಿದಲ್ಲಿ ಇದರ ಹಿಂದಿರುವ ಎಲ್ಲಾ ಷಡ್ಯಂತ್ರಗಳು ಬಯಲಿಗೆ ಬರಲಿದೆ ಎಂದರು.
ಸುಹಾಸ್ ಕುಟುಂಬಸ್ಥರು ಮೂಲತಃ ಕಾಂಗ್ರೆಸ್ ಪರಿವಾರವಾಗಿದ್ದರೂ, ಬಂಟ್ವಾಳ ಸೇರಿದಂತೆ ಯಾರೊಬ್ಬ ಕಾಂಗ್ರೆಸ್ ನಾಯಕರು ಕನಿಷ್ಠ ಸೌಜನ್ಯಕ್ಕಾದರೂ ಅವರ ಹೆತ್ತವರು, ಕುಟುಂಬಕ್ಕೆ ಸಾಂತ್ವನ ಹೇಳುವುದಿರುವುದು ಕಾಂಗ್ರೆಸ್ ನಾಯಕರ ತುಷ್ಠೀಕರಣ ನೀತಿಗೆ ನಿದರ್ಶನವಾಗಿದೆ ಎಂದರು.
ಸುಹಾಸ್ ಶೆಟ್ಟಿ ಮಾವ ಚಂದ್ರಶೇಖರ ಶೆಟ್ಟಿ ಪುಳಿಮಜಲು ಅವರು ಮಾತನಾಡಿ, ಸುಹಾಸ್ ಶೆಟ್ಟಿ ತನ್ನ ಮನೆಯ, ಕುಟುಂಬದ ಮತ್ತು ಹಿಂದೂ ಸಮಾಜದ ಶಕ್ತಿಯಾಗಿ ಬೆಳೆಯುತ್ತಿದ್ದ. ಅವರ ಔನ್ನತ್ಯ ಸಹಿಸಲಾರದೇ ಅವರನ್ನು ಕೊನೆಗಾಣಿಸಲಾಗಿದೆ. ಆದರೆ ನಮ್ಮ ದೇಶದ ಭಗವಾಧ್ವಜ ಹಿಂದೂ ಕಾರ್ಯಕರ್ತರ ಉಸಿರಿನಿಂದ ಹಾರಾಡುತ್ತಿದೆ. ಇದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ದ.ಕ. ಸಂಸದ ಕ್ಯಾ. ಬೃಜೇಶ್ ಚೌಟ, ರಾಷ್ಟ್ರೀಯ ಹಿಂದೂ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಹಿಂದೂ ಜಾಗರಣ ವೇದಿಕೆ ನಾಯಕ ಜಗದೀಶ ಕಾರಂತ, ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಶಾಸಕ ಕ್ಯಾ. ಗಣೇಶ್ ಕಾರ್ಣಿಕ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ವಿಶ್ವಹಿಂದೂ ಪರಿಷತ್ ದಕ್ಷಿಣ ಕರ್ನಾಟಕ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಬಂಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್ ಕುಮಾರ್ ರೈ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಸುಲೋಚನಾ ಜಿ.ಕೆ.ಭಟ್, ಮಹೇಶ್ ವಿಕ್ರಮ್ ಹೆಗ್ಡೆ ಕೋಸ್ಟ್ ಗಾರ್ಡ್, ಸುಹಾಸ್ ತಂದೆ ಮೋಹನ ಶೆಟ್ಟಿ, ತಾಯಿ ಸುಲೋಚನಾ ಶೆಟ್ಟಿ, ಕುಟುಂಬಿಕರಾದ ರಾಜೇಶ್ ಭಂಡಾರಿ ಪುಳಿಮಜಲು, ಶಶಿಕಲಾ, ವಿಶಾಲಾಕ್ಷಿ, ಸಂಜೀವ ಶೆಟ್ಟಿ, ವಸಂತ್ ಶೆಟ್ಟಿ ಪುಳಿಮಜಲು, ವಿವಿಧ ಹಿಂದೂ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು. ಸುಹಾಸ್ ಶೆಟ್ಟಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ದೇವದಾಸ ಶೆಟ್ಟಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.