
ಜಿಲ್ಲೆಯಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ: ಮಾಜಿ ಸಚಿವ ರೈ ನೇತೃತ್ವದ ಕಾಂಗ್ರೆಸ್ ನಿಯೋಗ ಐಜಿ ಭೇಟಿ, ಚರ್ಚೆ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಿಂಗಳೊಳಗೆ ಕೋಮು ಸಂಬಂಧಿಯಾಗಿ ಮೂರು ಹತ್ಯಾ ಪ್ರಕರಣಗಳು ನಡೆದ ಪರಿಣಾಮ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವ ಹಿನ್ನಲೆಯಲ್ಲಿ ಮಾಜಿ ಸಚಿವ ಬಿ. ರಮನಾಥ ರೈ ನೇತೃತ್ವದ ಕಾಂಗ್ರೆಸ್ ನಿಯೋಗ ಪಶ್ಚಿಮ ವಲಯ ಐಜಿಪಿ ಡಾ. ಅಮಿತ್ ಸಿಂಗ್ ಅವರನ್ನು ಭೇಟಿಯಾಗಿ ಸುರ್ದೀಘ ಚರ್ಚೆ ನಡೆಸಿತು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು, ಶಾಂತಿ, ಸೌಹಾರ್ಧತೆಯನ್ನು ಮರು ಸ್ಥಾಪಿಸುವುದು, ಇಂತಹ ಘಟನೆಗಳು ಮತ್ತೊಮ್ನೆ ಮರುಕಳಿಸದಂತೆ ಎಚ್ಚರವಹಿಸಿ ಸೂಕ್ತ ಕ್ರಮಕೈಗೊಳ್ಳುವ ದೆಸೆಯಲ್ಲಿ ರಮಾನಾಥ ರೈ ನೇತೃತ್ವದ ನಿಯೋಗ ಐಜಿಪಿಯವರೊಂದಿಗೆ ಚರ್ಚೆ ನಡೆಸಿತು.
ಜಿಲ್ಲೆಯಲ್ಲಿ ರೌಡಿಶೀಟರ್‌ಗಳು ಹಾಗೂ ಕ್ರಿಮಿನಲ್ ಹಿನ್ನಲೆಯುಳ್ಳವರ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಕಾರಣಕ್ಕೂ ಮೃದು ಧೋರಣೆ ತಾಳಬಾರದು. ಕಾಲ ಕಾಲಕ್ಕೆ ರೌಡಿ ಶೀಟರ್‌ಗಳ ಪೆರೇಡ್ ನಡೆಸುವ ಪ್ರಕ್ರಿಯೆ ಜಿಲ್ಲೆಯಲ್ಲಿ ನಿಂತಿರುವುದನ್ನು ಪುನರಾರಂಭಿಸಿ ರೌಡಿಗಳ ಹಾಗೂ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರ ಬಗ್ಗೆ ನಿಗಾವಹಿಸುವುದಲ್ಲದೆ ಕಠಿಣ ಕ್ರಮ ಕೈಗೊಳ್ಳುವಂತೆ ಐಜಿಪಿ ಡಾ. ಅಮಿತ್ ಸಿಂಗ್ ಅವರಿಗೆ ರಮಾನಾಥ ರೈ ಮನವಿ ಮಾಡಿದ್ದಾರೆ.
ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಐಜಿಪಿ ಡಾ. ಸಿಂಗ್ ಅವರು ಜಿಲ್ಲೆಯಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯನ್ನು ತರುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕ್ರಿಮಿನಲ್‌ಗಳು ಬಾಲ ಬಿಚ್ಚದಂತೆ ಎಚ್ಚರ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆನ್ನಲಾಗಿದೆ.
ನಿಯೋಗದಲ್ಲಿ ಕಾಂಗ್ರೆಸ್ ಮುಖಮನಡರಾದ ಪಿಯೂಸ್ ಎಲ್. ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ.ಎಂ. ಅಬ್ಬಾಸ್ ಅಲಿ, ಪದ್ಮಶೇಖರ್ ಜೈನ್, ಬೇಬಿ ಕುಂದರ್, ಇಬ್ರಾಹಿಂ ನವಾಝ್, ಸುದೀಪ್ ಕುಮಾರ್ ಶೆಟ್ಟಿ, ಸುರೇಶ್ ನಾವೂರು, ಚಂದ್ರಶೇಖರ್ ಭಂಡಾರಿ, ಬಾಲಕೃಷ್ಣ ಅಂಚನ್, ಇಬ್ರಾಹಿಂ ಕೈಲಾರ್ ಮೊದಲಾದವರಿದ್ದರು.