
8 ಮನೆಗಳು ಸಂಪೂರ್ಣ, 31 ಮನೆಗಳು ಭಾಗಶಃ ಹಾನಿ
ಉಳ್ಳಾಲ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ತಾಲೂಕು ವ್ಯಾಪ್ತಿಯಲ್ಲಿ ಹಲವು ಮನೆಗಳು ಜಲಾವೃತಗೊಂಡಿದ್ದು, ಜನ ಜೀವನ ಅಸ್ತವ್ಯಸ್ತ ಗೊಂಡಿದೆ.
ಒಟ್ಟು ಎಂಟು ಮನೆಗಳು ಸಂಪೂರ್ಣ ಹಾನಿಯಾಗಿದ್ದು, 31 ಮನೆಗಳು ಭಾಗಶಃ ಹಾನಿಯಾಗಿದೆ. 102 ಮನೆಗಳಿಗೆ ನೀರು ನುಗ್ಗಿದೆ. ಈ ಕುಟುಂಬಗಳ ಸ್ಥಳಾಂತರ ಕಾರ್ಯ ಮಾಡಲಾಗಿದೆ. ಕೆಲವು ಮನೆಗಳ ಕಾಂಪೌಂಡ್ ಗೋಡೆ ಬಿದ್ದು ಹಾನಿಯಾಗಿದೆ.
ತಾಲೂಕಿನ ಕುಂಪಲ, ಕಲ್ಲಾಪು, ಧರ್ಮ ನಗರ, ಉಚ್ಚಿಲ, ತಲಪಾಡಿ, ಕಲ್ಲಾಪು ಪಟ್ಲ, ವಿದ್ಯಾನಗರ, ಕಲ್ಕಟ್ಟ, ಉಳ್ಳಾಲ ಬೈಲ್ ಮುಂತಾದ ಕಡೆಗಳಲ್ಲಿ ಹಲವು ಮನೆಗಳು ಜಲಾವೃತಗೊಂಡಿದ್ದು ಮನೆಯೊಳಗೆ ನೀರು ನುಗ್ಗಿದೆ. ಬಹಳಷ್ಟು ಕುಟುಂಬಗಳು ರಾತ್ರಿ ವೇಳೆ ಬೇರೆಡೆ ಸ್ಥಳಾಂತರ ಗೊಂಡಿದೆ.ಕಲ್ಲಾಪುವಿನಲ್ಲಿ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.
ಉಳ್ಳಾಲ ನಗರ ಸಭೆ ವ್ಯಾಪ್ತಿಯಲ್ಲಿ ಜಲಾವೃತಗೊಂಡಿದ್ದ ಮನೆಗಳ ಕುಟುಂಬಸ್ಥರನ್ನು, ಬೀರಿ, ಕೋಟೆಕಾರ್, ಮಡ್ಯಾರ್‌ನಲ್ಲಿ ಜಲಾವೃತಗೊಂಡ ಮನೆಗಳ ಕುಟುಂಬಸ್ಥರನ್ನು ಅಧಿಕಾರಿಗಳು ಸ್ಥಳಾಂತರಗೊಳಿಸಿದ್ದಾರೆ.
ಅಜ್ಜಿನಡ್ಕದಲ್ಲಿ ನೀರು ನುಗ್ಗಿದ ಮನೆಗಳಲ್ಲಿದ್ದ ಜನರನ್ನು ರಬ್ಬರ್ ಬೋಟ್ ಮೂಲಕ ಸ್ಥಳಾಂತರಿಸಲಾಗಿದ್ದು, ಸಂಕಷ್ಟಕ್ಕೀಡಾದವರಿಗೆ ಗ್ಲೋಬಲ್ ಪ್ರೆಂಡ್ಸ್ ಅಜ್ಜಿನಡ್ಕ ಆಹಾರ ವ್ಯವಸ್ಥೆಯನ್ನು ಮಾಡಿದೆ.
ಹಿದಾಯತ್ ನಗರದಲ್ಲಿ ರಮ್ಲಾ ಎಂಬವರ ಬಾಡಿಗೆ ಮನೆಯ ತಡೆಗೋಡೆ ಉರುಳಿ ಮನೆಬಳಕೆ ಸಾಮಾಗ್ರಿಗಳು ನೀರು ಪಾಲಾಗಿದೆ. ಮುಳ್ಳುಗುಡ್ಡೆ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿ ಮನೆ ಬಳಕೆ ವಸ್ತುಗಳು ಗೃಹೋಪಯೋಗಿ ವಸ್ತುಗಳು ನೀರು ಪಾಲಾಗಿದೆ.
ಸೋಮೇಶ್ವರದಲ್ಲಿ ಮನೆಗಳು ಜಲಾವೃತಗೊಂಡು ಕುಟುಂಬಸ್ಥರು ಹೊರಗೆ ಬಾರದ ಸ್ಥಿತಿಯಲ್ಲಿ ಇದ್ದಾರೆ. ಫಜೀರ್ ಪೆರ್ನೆ ಶ್ರೀ ಡೆನಿಸ್ ಆಪೊಸ್ ಮನೆಗೆ ನೆರೆ ಹಾಗೂ ಗುಡ್ಡ ಜರಿದು ಆಪಾಯ ಸಂಭವಿಸಿದೆ. ಉಳ್ಳಾಲ ಬೈಲ್‌ನಲ್ಲಿ ಮನೆಗಳು ಜಲಾವೃತಗೊಂಡು ಹಾನಿಯಾಗಿದ್ದು, ಕುಟುಂಬಸ್ಥರ ಸ್ಥಳಾಂತರ ಕಾರ್ಯ ಮುಂದುವರಿದಿದೆ. ಅಜ್ಜಿನಡ್ಕ ಸಮೀಪದ ಕೊಮರಂಗಲ ಬಳಿ ೨೫ ಆಡುಗಳು ಮಳೆನೀರಿನಲ್ಲಿ ಮುಳುಗಿ ಸಾವಿಗಾಡಿದೆ. ಸ್ಥಳಾಂತರ ಕಾರ್ಯ ಮುಂದುವರಿದಿದೆ.
ಕಡಲ್ಕೊರೆತ:
ಬಟ್ಟಪ್ಪಾಡಿ, ಉಚ್ಚಿಲ, ಮೊಗವೀರ ಪಟ್ಣ ಮುಂತಾದೆಡೆ ಕಡಲ್ಕೊರೆತ ತೀವ್ರ ಪ್ರಮಾಣದಲ್ಲಿ ಇದೆ. ಇದರಿಂದ ಇಲ್ಲಿನ ಜನರಲ್ಲಿ ಆತಂಕ ಮನೆ ಮಾಡಿದೆ. ಯಾವುದೇ ಮನೆಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಇಲ್ಲಿನ ಬಹಳಷ್ಟು ಕುಟುಂಬ ಸ್ಥಳಾಂತರ ಆಗಿರುವುದರಿಂದ ಖಾಲಿ ಮನೆಗಳು ಜಾಸ್ತಿ ಇವೆ.
ಘಟನಾ ಸ್ಥಳಕ್ಕೆ ಉಳ್ಳಾಲ ತಾಲೂಕು ತಹಶೀಲ್ದಾರ್ ಪುಟ್ಟರಾಜು, ಕಂದಾಯ ನಿರೀಕ್ಷಕ ಪ್ರಮೋದ್, ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮತ್ತಡಿ, ಗ್ರಾಮಕರಣಿಕ ಸುರೇಶ್ ಮತ್ತಿತರರು ರಾತ್ರಿ ವೇಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.