
ಮೂವರು ಹಿರಿಯ ಯಕ್ಷಗಾನ ಕಲಾವಿದರಿಗೆ ಮತ್ತು ದಿ. ಜಯರಾಮ ಆಚಾರ್ಯರಿಗೆ ‘ಪುಳಿಂಚ ಪ್ರಶಸ್ತಿ’ ಪ್ರದಾನ
ಬಂಟ್ವಾಳ: ಅಗಲಿರುವ ಹಿರಿಯ ಯಕ್ಷಗಾನ ಕಲಾವಿದ, ನವರಸ ನಾಯಕ ಬೆಜ್ಜದಗುತ್ತು ದಿ. ಪುಳಿಂಚ ರಾಮಯ್ಯ ಶೆಟ್ಟರ ಸ್ಮರಣಾರ್ಥ ಮೂರು ವರ್ಷಕ್ಕೊಮ್ಮೆ ನೀಡಲಾಗುವ ‘ಪುಳಿಂಚ ಪ್ರಶಸ್ತಿ’ಯನ್ನು ಈ ಬಾರಿ ಯಕ್ಷಗಾನದ ಮೂವರು ಪ್ರಸಿದ್ಧ ಕಲಾವಿದರಿಗೆ ಪ್ರದಾನ ಮಾಡಲಾಯಿತು.
ಶನಿವಾರ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಚೆಂಡೆ ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ದೈವದ ಪುನಃ ಪ್ರತಿಷ್ಠೆ, ಸಾನಿಧ್ಯ ಕಲಶಾಭಿಷೇಕ ಮತ್ತು ಪಂಚಮ ತ್ರೈವಾರ್ಷಿಕ ‘ಪುಳಿಂಚ ಪ್ರಶಸ್ತಿ’ ಹಾಗೂ ಮರಣೋತ್ತರ ಪ್ರಶಸ್ತಿ ಪ್ರದಾನ ಮತ್ತು ಕೋಲೋತ್ಸವ ಪ್ರಯುಕ್ತ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ತೆಂಕುತಿಟ್ಟಿನ ಹಿರಿಯ ಕಲಾವಿದರಾದ ಬೋಳಾರ ಸುಬ್ಬಯ್ಯ ಶೆಟ್ಟಿ, ಗೋಣಿಬೀಡು ಸಂಜಯಕುಮಾರ್ ಶೆಟ್ಟಿ ಮತ್ತು ಮಿಜಾರು ತಿಮ್ಮಪ್ಪ ಅವರಿಗೆ 2023-25ನೇ ಸಾಲಿನ ಪುಳಿಂಚ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಇದೇ ವೇಳೆ ದಿ.ಬಂಟ್ವಾಳ ಜಯರಾಮ ಆಚಾರ್ಯರಿಗೆ ಮರಣೋತ್ತರ ಪ್ರಶಸ್ತಿಯನ್ನು ಅವರ ಪತ್ನಿ ಶ್ಯಾಮಲ ಅವರಿಗೆ ಸಮರ್ಪಿಸಿ ಗೌರವಿಸಲಾಯಿತು.
ಪುತ್ತೂರು ವಿವೇಕಾನಂದ ವಿದ್ಯವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಧ್ಯಾತ್ಮದ ಶಕ್ತಿ ದೇಶದಲ್ಲಿದ್ದು, ಧರ್ಮ ಪ್ರಸಾರದಲ್ಲಿ ಯಕ್ಷಗಾನದ ಪಾತ್ರ ಮಹತ್ತರವಾದ ಕೊಡುಗೆ ನೀಡಿದ್ದು, ಈ ನಿಟ್ಟಿನಲ್ಲಿ ಪುಳಿಂಚ ಶ್ರೀಧರ ರೈ ದಂಪತಿ ಹಾಗೂ ಮೊಮ್ಮಕ್ಕಳು ಮುಂದುವರಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಭಾರತದಲ್ಲಿ ಹಿಂದೂವಾಗಿ ಹುಟ್ಟಿರುವುದು ಪುಣ್ಯ, ಹಿಂದೂ ಧರ್ಮದ ನಾಶಕ್ಕೆ ನಿರಂತರವಾಗಿ ಪ್ರಯತ್ನ ನಡೆಯುತ್ತಿದ್ದು, ಪಹಲ್ಗಾಮ್ ಘಟನೆಯೂ ಇದಕ್ಕೆ ಉದಾಹರಣೆಯಾಗಿದೆ. ದೇಶದ ಒಳಗಿನ ಶತ್ರುಗಳು ಅಪಾಯಕಾರಿಯಾಗಿದ್ದು, ಈ ಕುರಿತು ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಮಹಿಮೆದ ಮಹಾಮಾತೆ:
‘ಚೆಂಡೆದಪ್ಪೆ ಕಲ್ಲುರ್ಟಿ’ ಕೃತಿಯನ್ನು ಹೊಸದಿಗಂತ ಪತ್ರಿಕೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ ಪಿ.ಎಸ್. ಅವರು ಬಿಡುಗಡೆಗೊಳಿಸಿ ಶುಭಹಾರೈಸಿದರು. ದೈವಜ್ಞರಾದ ಶಶಿಕುಮಾರ್ ಪಂಡಿತ್ ಅವರು ಧ್ವನಿಸುರುಳಿ ಬಿಡುಗಡೆಗೊಳಿಸಿ ಶುಭಹಾರೈಸಿದರು.
ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಅತಿಥಿಗಳಾಗಿ ಭಾಗವಹಿಸಿದ್ದರು. ಹಿರಿಯ ಯಕ್ಷಗಾನ ಕಲಾವಿದರಾದ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು ದಿ.ಪುಳಿಂಚ ರಾಮಯ್ಯ ರೈ ಅವರ ಸಂಸ್ಮರಣೆಗೈದರು. ಮಂಗಳೂರು ‘ಯಕ್ಷಾಂಗಣ’ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣಗೈದರು.
ಪುಳಿಂಚ ಸೇವಾ ಪ್ರತಿಷ್ಠಾನ (ರಿ.)ದ ಅಧ್ಯಕ್ಷರು, ನ್ಯಾಯವಾದಿ ಪುಳಿಂಚ ಶ್ರೀಧರ ಶೆಟ್ಟಿ ಅವರು ಪ್ರಸ್ತಾವನೆಗೈದು, ಸ್ವಾಗತಿಸಿದರು.
ಸಂಘಟಕ ಜನಾರ್ದನ ಅಮ್ಮುಂಜೆ ಸಹಕರಿಸಿದರು. ಪ್ರತಿಷ್ಠಾನದ ಕೋಶಾಧಿಕಾರಿ ಪ್ರತಿಭಾ ಶೆಟ್ಟಿ ಪುಳಿಂಚ ವಂದಿಸಿದರು. ಯಕ್ಷಗಾನ ಕಲಾವಿದ ಅಶೋಕ್ ಭಟ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ದೊಂದಿ ಬೆಳಕಿನಲ್ಲಿ ತ್ರೈಮಾಸಿಕ ಕೋಲೋತ್ಸವ ನೆರವೇರಿತು. ಬೆಳಿಗ್ಗೆ ಗೃಹ ಪ್ರವೇಶ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.