
ಮಗಳ ಸಾವಿನ ಬಗ್ಗೆ ಅನುಮಾನವಿದೆ: ಆಕಾಂಕ್ಷಾಳ ತಂದೆಯಿಂದ ಆರೋಪ
ಬೆಳ್ತಂಗಡಿ: ಧರ್ಮಸ್ಥಳದ ಯುವತಿ ಪಂಜಾಬ್ನಲ್ಲಿ ಕಾಲೇಜು ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ ಘಟನೆಯ ಬಗ್ಗೆ ಗೊಂದಲ ಮುಂದುವರಿದಿದ್ದು, ಮನೆಯವರನ್ನು ವಂಚಿಸುವ ಯತ್ನ ಅಲ್ಲಿನ ಸ್ಥಳೀಯ ಪೊಲೀಸರಿಂದ ನಡೆಯುತ್ತಿದೆ ಎಂದು ಮೃತ ಆಕಾಂಕ್ಷಾ ಅವರ ತಂದೆ ಸುರೇಂದ್ರ ಆರೋಪಿಸಿದ್ದಾರೆ.
ಆದರೆ ಸೋಮವಾರ ಸುರೇಂದ್ರನ್ ಅವರ ಕೈಗೆ ಸ್ಥಳೀಯ ಪೊಲೀಸರು ಎಫ್.ಐ.ಆರ್. ಪ್ರತಿಯನ್ನು ನೀಡಿದ್ದಾರೆ. ಸ್ಥಳೀಯ ಪಂಜಾಬಿ ಭಾಷೆಯಲ್ಲಿದ್ದ ಈ ಎಫ್.ಐ.ಆರ್. ವರದಿಯನ್ನು ಸ್ಥಳೀಯರ ಸಹಕಾರದಿಂದ ಓದಿ ತಿಳಿದುಕೊಂಡಾಗ ಅದರಲಿ ತನ್ನ ಮಗಳ ಸಾವುನ ಬಗ್ಗೆ ಯಾವುದೇ ಅನುಮಾನವಿಲ್ಲ. ಖಿನ್ನತೆಯಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದೊಂದು ಆತ್ಮಹತ್ಯೆ ಪ್ರಕರಣ ಎಂದು ದಾಖಲಿಸಿರುವುದು ತಿಳಿದು ಬಂದಿದೆ.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮನೆಯವರು ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದು, ಇದಾದ ಬಳಿಕ ಇದೀಗ ಸುರೇಂದ್ರನ್ ಅವರಿಂದ ಮತ್ತೊಂದು ದೂರು ಪಡೆದುಕೊಂಡಿದ್ದಾರೆ. ದೂರಿನಲ್ಲಿ ತಮಗೆ ಮಗಳ ಸಾವಿಗೆ ಸಂಸ್ಥೆಯಲ್ಲಿ ಪ್ರಾಧ್ಯಾಪಕನಾಗಿರುವ ಸಿ.ಮ್ಯಾಥ್ಯೂ ಕಾರಣನಾಗಿದ್ದಾನೆ ಎಂದು ಆರೋಪಿಸಿದ್ದಾರೆ.
ಇದೀಗ ಆಕಾಂಕ್ಷಾ ತಂದೆ ತಿಳಿಸುವ ಮಾಹಿತಿಯಂತೆ ಘಟನೆ ನಡೆದ ದಿನದ ಕಾಲೇಜಿನ ಸಿಸಿಟಿವಿ ಕ್ಯಾಮರಾ ಫೂಟೇಜ್ ಗಳನ್ನು ಸರಿಯಾಗಿ ನೀಡುತ್ತಿಲ್ಲ. ಆಕಾಂಕ್ಷಾ ಕೆಳಗೆ ಬೀಳುವ ದೃಶ್ಯಗಳನ್ನು ಮಾತ್ರ ತೋರಿಸಲಾಗುತ್ತಿದೆ. ಆಕೆ ಹೇಗೆ ಬಿದ್ದಳು? ಯಾರಾದರೂ ತಳ್ಳಿದರೇ? ಅಥವಾ ಆಕೆ ಹಾರಿದಳೇ ಎಂಬುದು ಎಲ್ಲೂ ಕಾಣಿಸುತ್ತಿಲ್ಲ. ಸಿಸಿಟಿವಿ ಕ್ಯಾಮರಾದ ಸಂಪೂರ್ಣ ದಾಖಲೆಗಳನ್ನು ತೋರಿಸುವಂತೆ ಒತ್ತಾಯಿಸಿದ್ದೇವೆ. ಆದರೆ ಅದನ್ನು ನೀಡಲು ಸಂಬಂಧಪಟ್ಟವರು ಸಿದ್ಧರಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಆರಂಭದಲ್ಲಿ ತನಿಖೆಯ ಭರವಸೆ ನೀಡಿದ್ದ ಪೊಲೀಸರು ಇದೀಗ ತಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವ ಭರವಸೆ ನೀಡಿರುವುದಾಗಿ ತಿಳಿಸಿದ ಅವರು ಇದೀಗ ಎರಡನೇ ಬಾರಿಗೆ ದೂರನ್ನು ಪೊಲೀಸರು ಸ್ವೀಕರಿಸಿದ್ದು, ಯಾವ ರೀತಿ ಪ್ರಕರಣ ದಾಖಲಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ. ಪ್ರಕರಣ ದಾಖಲಿಸುವ ಬಗ್ಗೆ ಇರುವ ಗೊಂದಲದಿಂದಾಗಿ ಇನ್ನೂ ಮರಣೋತ್ತರ ಪರೀಕ್ಷೆ ನಡೆದಿಲ್ಲ ಎಂದು ತಿಳಿದುಬಂದಿದೆ.