
ಬಿಜೆಪಿ ಪರಿವಾರ ಹಿಂದೂ ಧಾರ್ಮಿಕ ಕೇಂದ್ರಗಳನ್ನು ಅಪವಿತ್ರ ಮಾಡುತ್ತಿದೆ
ಬೆಳ್ತಂಗಡಿ: ತೆಕ್ಕಾರು ಗ್ರಾಮದಲ್ಲಿ ದೇವಸ್ಥಾನದ ಬ್ರಹ್ಮ ಕಲಶದ ಧಾರ್ಮಿಕ ಸಭೆಯಲ್ಲಿ ಸ್ಥಳೀಯ ಶಾಸಕ ಹರೀಶ ಪೂಂಜಾ, ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮಕ್ಕೆ ಸ್ಥಳ ನೀಡಿದ್ದ ಮುಸ್ಲಿಂ ಸಮುದಾಯವನ್ನು ಹೀನಾಯಮಾನವಾಗಿ ಬೈದಿದ್ದರು. ಇದನ್ನು ಖಂಡಿಸಿ ಬೆಳ್ತಂಗಡಿ ಸಮಾನ ಮನಸ್ಕ ಒಕ್ಕೂಟದವರು ಇತ್ತೀಚಿಗೆ ಪ್ರತಿಭಟನಾ ಸಭೆ ನಡೆಸಿದರು.
ದೇವಸ್ಥಾನದ ಒಳಗೆ ಧಾರ್ಮಿಕ ಭಾಷಣ ಮಾಡಬೇಕು. ಆದರೆ ಈ ಬಿಜೆಪಿ ಪರಿವಾರದವರು ಅಲ್ಲಿಯೂ ಬ್ಯಾರಿಗಳಿಗೆ ಬೈಯ್ಯುತ್ತಾರೆ, ದೈವಸ್ಥಾನದಲ್ಲಿ ದೈವಗಳ ಕುರಿತು ಮಾತನಾಡಬೇಕು, ಅಲ್ಲಿಯೂ ದ್ವೇಷದ ಭಾಷಣ ಮಾಡುತ್ತಾರೆ. ಹಾಗಾದರೆ ಇವರು ಹಿಂದೂ ಧರ್ಮದ ಉದ್ದಾತ್ತ ಸಂಗತಿಗಳ ಕುರಿತು ಧಾರ್ಮಿಕ ಭಾಷಣ ಮಾಡುವುದು ಯಾವಾಗ ಎಂದು ಹೋರಾಟಗಾರ ಎಂ ಜಿ ಹೆಗಡೆ ಪ್ರಶ್ನಿಸಿದರು.
ದೇವಸ್ಥಾನಗಳು ಆಗಮ ಶಾಸ್ತ್ರದ ಪ್ರಕಾರ ನಿರ್ಮಾಣವಾಗುತ್ತವೆ. ಅಲ್ಲಿ ಭಕ್ತ ಮತ್ತು ದೇವರ ನಡುವಿನ ಮೌನ ಸಂವಾದ ತೆರೆದುಕೊಳ್ಳಬೇಕು. ಸೃಷ್ಟಿಗೆ ಕಾರಣವಾದ ಪರಮ ಅತ್ಮವನ್ನು ಭಕ್ತಿ ಮತ್ತು ಶೃದ್ಧೆಯಿಂದ ಸ್ಮರಿಸುವ, ಧ್ಯಾನಿಸುವ, ಮತ್ತು ಒಳ್ಳೆಯ ಪ್ರಚೋದನೆಗೆ ಬೇಡುವ ಪವಿತ್ರ ಸ್ಥಳ. ಅಲ್ಲಿ ನಿಂತು ಯಾರೇ ಆಗಲಿ, ಯಾವುದೇ ಪಕ್ಷದವರು, ಸಂಘಟನೆಗಳಾಗಲಿ, ದ್ವೇಷ ಹಿಂಸೆಯ ಮಾತನ್ನಾಡುವುದು ದೇವಸ್ಥಾನದ ಪವಿತ್ರತೆಯನ್ನು ಹಾಳು ಮಾಡಿದಂತೆ.
ದೇವಸ್ಥಾನದ ಆಡಳಿತ ಮಂಡಳಿಗಳು* ದೇವಸ್ಥಾನದ ಕಾರ್ಯಕ್ರಮಗಳಲ್ಲಿ ದ್ವೇಷ, ರಾಜಕಾರಣ, ಹಿಂಸೆಯ ಮಾತುಗಳನ್ನು ಆಡುವುದನ್ನು ನಿಷೇಧ ಮಾಡಬೇಕು. ಇಲ್ಲವಾದರೆ ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸುವ ಪಾಪ ಅವರನ್ನೂ ಸುತ್ತಿಕೊಳ್ಳುತ್ತದೆ.
ಬಿಜೆಪಿ ಪರಿವಾರ ದೇವಸ್ಥಾನ ದೈವಸ್ಥಾನದಲ್ಲಿ ರಾಜಕೀಯ ಮತೀಯ ಭಾಷೆ ಬಳಸಿದರೆ ಭಕ್ತರು ವಿರೋಧ ಮಾಡಬೇಕು*. ತನ್ಮೂಲಕ ಹಿಂದೂ ದೇವಸ್ಥಾನದ ಪಾವಿತ್ರ್ಯ ಉಳಿಸಬೇಕು ಎಂದರು.
ಅಮೃತಂ ಶರಣಂ ಮಮ ಅಂದರೆ, ಮೋಕ್ಷ ನೀಡುವ ಶಕ್ತಿಗೆ ಸಂಪೂರ್ಣ ಶರಣಾಗುವುದು. ಬ್ರಹ್ಮಕಲಶ ಮಾಡುವಾಗ ದೈಹಿಕ ಮತ್ತು ಮಾನಸಿಕ ಶುದ್ಧತೆ, ಶಾಸ್ತ್ರಿಯ ನಿಯಮಗಳನ್ನು ದೇವಸ್ಥಾನದಲ್ಲಿ ಪ್ರತಿಯೊಬ್ಬರೂ ಪಾಲಿಸಬೇಕು. ಇಲ್ಲಿ ಯಾವುದೇ ರಾಜಕೀಯ ಪಕ್ಷದವರು, ಸಂಘಟನೆಗಳು ಮತೀಯ , ದ್ವೇಷದ , ಹಿಂಸೆಯ ಮಾತನ್ನಾಡುವುದು ಎಂದರೆ ಹಿಂದೂಗಳು ನಂಬುವ ದೇವರಿಗೆ ಮಾಡುವ ಅಪಚಾರ ಮಾಡಿದಂತೆ. ಕರಾವಳಿ ಭಾಗದ ದೇವಸ್ಥಾನಗಳು, ಮತ್ತು ದೈವಸ್ಥಾನಗಳಲ್ಲಿ, ಕೊಳಕು ಮನಸ್ಸು ಮತ್ತು ಅದರ ಕೆಟ್ಟ ಭಾಷೆಯಿಂದ ದೇವಸ್ಥಾನದ ದೇವರ ನಡೆಯ ಸ್ಥಳವನ್ನು, ವಾಸ್ತು ಪರಿಧಿಯನ್ನು ಮಲೀನ ಮಾಡುವ ಜನರ ವಿರುದ್ಧ ಹಿಂದೂ ಭಕ್ತರು ಹೋರಾಟ ಮಾಡಬೇಕು ಎಂದು ಕರೆ ನೀಡಿದರು.