
ಆತ್ಮಹತ್ಯೆ ಯತ್ನ: ಅಧಿಕ ನಿದ್ರೆ ಮಾತ್ರೆ ಸೇವಿಸಿ ತಾಯಿ ಸಾವು, ಮಗ ಗಂಭೀರ
ಬೆಳ್ತಂಗಡಿ: ಆರ್ಥಿಕ ಸಮಸ್ಯೆ ಮತ್ತು ಅನಾರೋಗ್ಯದ ಕಾರಣದಿಂದ ಆತ್ಮಹತ್ಯೆಗೆ ಯತ್ನಿಸಿ ಅತಿಯಾಗಿ ನಿದ್ರೆ ಮಾತ್ರೆ ಸೇವಿಸಿದ್ದ ವೃದ್ಧೆ ತಾಯಿ ಸಾವಿಗೀಡಾಗಿ ಪುತ್ರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ಸಂಜೆ ಸಂಭವಿಸಿದೆ.
ಮೃತರು ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ದಿ.ಕುಂಞಿರಾಮನ್ ನಾಯರ್ ಅವರ ಪತ್ನಿ ಕಲ್ಯಾಣಿ(96) ಎಂಬವರಾಗಿದ್ದಾರೆ. ಅವರ ಪುತ್ರ, ಖ್ಯಾತ ಜನಪದ ಕಲಾವಿದ, ಶಿಕ್ಷಕ ಜಯರಾಂ ಕೆ (58) ಅವರು ಗಂಭೀರಾವಸ್ಥೆಯಲ್ಲಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೇ.10 ರಂದು ಬೆಳಗ್ಗೆ ಜಯರಾಂ ಅವರ ಮನೆಯ ಬಳಿಯಿಂದ ಯಾವುದೇ ಶಬ್ದ ಕೇಳದೆ ಇದ್ದುದರಿಂದ ನೆರೆ ಹೊರೆಯವರು ಬಂದು ನೋಡಿದಾಗ ತಾಯಿ ಮತ್ತು ಮಗ ಮನೆಯೊಳಗೆ ದೇವರ ಕೋಣೆಯ ಎದುರು ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಳಿಕ ಸ್ಥಳೀಯರ ಸಹಕಾರದೊಂದಿಗೆ ಮನೆಯ ಬಾಗಿಲು ತೆಗೆದು ಒಳ ಪ್ರವೇಶಿಸಿದಾಗ ಇಬ್ಬರೂ ಉಸಿರಾಡುತ್ತಿದ್ದರು. ತಕ್ಷಣ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಯಿತು. ಮೂರು ದಿನಗಳವರೆಗೂ ತೀವ್ರ ನಿಗಾ ಘಟಕದಲ್ಲಿದ್ದ ಅವರ ಪೈಕಿ ತಾಯಿ ಕಲ್ಯಾಣಿ ಅವರು ಮೇ.12 ರಂದು ಕೊನೆಯುಸಿರೆಳೆದಿದ್ದಾರೆ. ಮಗ ಜಯರಾಂ ಕೆ ಅವರು ಆರೋಗ್ಯ ಸ್ಥಿತಿ ಇನ್ನಷ್ಟು ವಿಷಮಿಸಿದ್ದರಿಂದ ಅವರನ್ನು ಮಂಗಳೂರಿಗೆ ದಾಖಲಿಸಲಾಗಿದೆ.
ಇದರಲ್ಲಿ ತಾಯಿಗೆ ಮೊದಲು ಮಾತ್ರೆ ಕುಡಿಸಿ ಬಳಿಕ ಅವರು ಸೇವಿಸಿದರೇ ಅಥವಾ ಇಬ್ಬರೂ ನಿರ್ಧಾರಕ್ಕೆ ಬಂದು ಒಟ್ಟಿಗೆ ಸೇವಿಸಿದರೆ ಎಂಬುದು ತಿಳಿದು ಬಂದಿಲ್ಲ.
ಇದೇ ವೇಳೆ ಜಯರಾಂ ಅವರು ಬರೆದಿದ್ದಾರೆ ಎನ್ನಲಾದ ನಾಲ್ಕು ಪುಟಗಳ ಪತ್ರ ಮನೆಯಲ್ಲಿ ಲಭಿಸಿದ್ದು, ಅದರಲ್ಲಿ ಸಾಲದ ಸಮಸ್ಯೆ, ತನ್ನ ಅನಾರೋಗ್ಯದ ಕಾರಣದಿಂದ ನಾವೇ ನಿದ್ದೆ ಮಾತ್ರೆ ಸೇವಿಸಿರುತ್ತೇವೆ. ನಮ್ಮನ್ನು ಬದುಕಿಸುವ ಪ್ರಯತ್ನ ಮಾಡಬೇಡಿ ಎಂದು ಬರೆಯಲಾಗಿದೆ ಎಂದು ತಿಳಿದು ಬಂದಿದೆ.