
ಕುಡುಪು ಗುಂಪು ಹತ್ಯೆ ಪ್ರಕರಣ-ಸರಕಾರದ ನಿರಾಸಕ್ತಿ: ಸಿಪಿಐಎಂ ಆರೋಪ
ಮಂಗಳೂರು: ಕುಡುಪುವಿನಲ್ಲಿ ನಡೆದ ಗುಂಪು ಹತ್ಯೆ ಪ್ರಕರಣದ ತನಿಖೆಯಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಆಸಕ್ತಿ ಕಳೆದುಕೊಂಡಿರುವುದು ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದಾಗ ಸ್ಪಷ್ಟವಾಗುತ್ತಿದೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯ ಆರೋಪಿಸಿದೆ.
ಪ್ರಕರಣದ ಪ್ರಧಾನ ಆರೋಪಿ ರವೀಂದ್ರ ನಾಯಕ್ ನನ್ನು ಇನ್ನೂ ಬಂಧಿಸದಿರುವುದು, ಉಳಿದ ಆರೋಪಿಗಳ ಪತ್ತೆ ಕಾರ್ಯ ಕೈ ಬಿಟ್ಟಿರುವುದು, ಪ್ರಕರಣ ಮುಚ್ಚಿ ಹಾಕುವಲ್ಲಿ ಪ್ರಧಾನ ಪಾತ್ರ ವಹಿಸಿದ ಪೊಲೀಸ್ ಕಮೀಷನರ್ ಅನುಪಮ್ ಅಗರ್‌ವಾಲ್ ಮೇಲೆ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ತನಿಖೆಯ ಜವಾಬ್ದಾರಿಯನ್ನು ಅದೇ ಕಳಂಕಿತ ಅಧಿಕಾರಿಗೆ ಹೊರಿಸಿರುವುದು ಸರಕಾರದ ನಿರಾಸಕ್ತಿಯನ್ನು ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದೆ.
ಕುಡುಪು ಮಾಬ್ ಲಿಂಚಿಂಗ್ ಪ್ರಕರಣ ಬಹಿರಂಗಗೊಂಡು ಜನಾಕ್ರೋಶ ವ್ಯಕ್ತಗೊಂಡಾಗ ಜಿಲ್ಲಾ ಉಸ್ತುವಾರಿ ಸಚಿವರು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವ ಮಾತುಗಳನ್ನು ಆಡಿದ್ದರು. ಆದರೆ, ಸುಹಾಸ್ ಶೆಟ್ಟಿ ಹತ್ಯೆಯ ತರುವಾಯ ರಾಜ್ಯ ಸರಕಾರ ಈ ಭರವಸೆಯನ್ನು ಮಾತ್ರ ಅಲ್ಲದೆ, ಅಶ್ರಫ್ ಮಾಬ್ ಲಿಂಚಿಂಗ್ ಪ್ರಕರಣದ ಕುರಿತು ಮಾತಾಡುವುದನ್ನೇ ಕೈ ಬಿಟ್ಟಿದೆ. ಇದು ಅಶ್ರಫ್ ಗುಂಪು ಹತ್ಯೆ ಪ್ರಕರಣದ ತನಿಖೆ ಹಳಿ ತಪ್ಪುವ, ಹತ್ಯೆಯ ಭಾಗಿದಾರರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಭೀತಿಗೆ ಕಾರಣವಾಗಿದೆ. ಮೃತ ಅಶ್ರಫ್ ನ ಸಂತ್ರಸ್ತ ಕುಟುಂಬವೂ ಈ ಆತಂಕಕ್ಕೆ ಒಳಗಾಗಿದೆ ಎಂದು ತಿಳಿಸಿದೆ.