
ಮೂರು ದಿನಗಳ ಹಲಸು, ಮಾವು ಹಾಗೂ ಕೃಷಿ ಮೇಳ-2025ಕ್ಕೆ ಚಾಲನೆ
ಕುಂದಾಪುರ: ಹಲಸು ಮತ್ತು ಮಾವು ಕಾಡುಗಳು, ಕೃಷಿ ಗದ್ದೆಗಳ ಅಂಚಿನಲ್ಲಿ ಈ ಮೊದಲು ಪ್ರಾಕೃತಿಕವಾಗಿ ಬೆಳೆಯುತ್ತಿತ್ತು. ಈ ಹಣ್ಣುಗಳ ಮೌಲ್ಯ ವರ್ಧಿತ ಉತ್ಪನ್ನಗಳು ಹೆಚ್ಚು ಲಾಭದಾಯಕ ಎಂಬುದನ್ನು ಅರಿತ ಕೃಷಿಕರು ಇಂದು ಇವುಗಳನ್ನು ವಾಣಿಜ್ಯ ಉದ್ದೇಶದಿಂದ ಬೆಳೆಯಲಾರಂಭಿಸಿದ್ದಾರೆ. ಹಲಸು ಮೇಳಗಳಂತಹ ಕಾರ್ಯಕ್ರಮಗಳು ರೈತರಿಗೆ ಈ ಬಗ್ಗೆ ಇನ್ನಷ್ಟು ಮಾಹಿತಿ ಒದಗಿಸುವ ವೇದಿಕೆಗಳಾಗಬೇಕು. ಹಾಗೆಯೇ ಗ್ರಾಹಕರಿಗೂ ಅವುಗಳ ವೈವಿಧ್ಯಮಯ ಉತ್ಪನ್ನಗಳನ್ನು ಪರಿಚಯಿಸಬೇಕು ಎಂದು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಕೋಟದ ಸಂಸ್ಕೃತಿ ಸಂಭ್ರಮ ಟ್ರಸ್ಟ್ ಹಾಗೂ ವಿಧಾತ್ರಿ ರೈತ ಉತ್ಪಾದಕ ಸಂಸ್ಥೆಗಳ ಆಶ್ರಯದಲ್ಲಿ ಹಲವು ಸಂಘ-ಸಂಸ್ಥೆಗಳು, ಇಲಾಖೆಗಳ ಸಹಯೋಗದೊಂದಿಗೆ ಕೋಟದಲ್ಲಿ ನಡೆಯುವ ಮೂರು ದಿನಗಳ ಹಲಸು, ಮಾವು ಹಾಗೂ ಕೃಷಿ ಮೇಳ-2025ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಭಾ ಕಾರ್ಯಕ್ರಮವನ್ನು ಚಾಲನೆಗೊಳಿಸಿದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಈಗ ಸಾಂಪ್ರದಾಯಿಕ ಕೃಷಿ ಪದ್ಧತಿ ಬದಿಗೆ ಸರಿದು ಸುಧಾರಿತ ಯಾಂತ್ರಿಕ ಪದ್ಧತಿ ಮುನ್ನೆಲೆಗೆ ಬಂದಿದೆ. ಆದ್ದರಿಂದಲೇ ಬಹುಭಾಗ ಕೃಷಿ ಭೂಮಿ ವಸತಿ, ವಾಣಿಜ್ಯ ಉದ್ದೇಶಗಳಿಗೆ ಬಲಿಯಾದರೂ, ಉಳಿದ ಕಡಿಮೆ ಭೂಮಿಯಲ್ಲೇ ಹೆಚ್ಚು ಇಳುವರಿ ಸಿಗುತ್ತಿದೆ. ಸುಧಾರಿತ ಹೈಬ್ರೀಡ್ ತಳಿಗಳೂ ಇದಕ್ಕೆ ಕಾರಣ. ಆದರೆ, ಕೃಷಿಯಲ್ಲಿ ರಾಸಾಯನಿಕ ಬಳಕೆ ಕಡಿಮೆ ಮಾಡಿ ಸಾವಯವ ಪದ್ಧತಿ ಅಳವಡಿಸಿಕೊಳ್ಳುವುದು ಅತಿ ಮುಖ್ಯ. ಇಲ್ಲವಾದರೆ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾದೀತು ಎಂದು ಕಳವಳ ವ್ಯಕ್ತಪಡಿಸಿದರು.
ಮಾಜಿ ಶಾಸಕ ರಘುಪತಿ ಭಟ್, ಗೀತಾನಂದ ಪ್ರತಿಷ್ಠಾನದ ಪ್ರವರ್ತಕ ಆನಂದ ಸಿ. ಕುಂದರ್, ಉದ್ಯಮಿ ದಿನೇಶ್ ಹೆಗ್ಡೆ, ಕೋಟ ಸಿಎ ಬ್ಯಾಂಕ್ ಅಧ್ಯಕ್ಷ ಡಾ. ಕೃಷ್ಣ ಕಾಂಚನ್, ಕೋಟ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಶೆಟ್ಟಿ, ಕೋಟ ಜಾಮಿಯಾ ಮಸೀದಿ ಅಧ್ಯಕ್ಷ ವಾಹಿದ್ ಆಲಿ, ಉದ್ಯಮಿ ಗೋಪಾಲ್ ಬಂಗೇರ, ಮಣೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಅಧ್ಯಕ್ಷ ಸತೀಶ್ ಕುಂದರ್ ಮುಖ್ಯ ಅತಿಥಿಗಳಾಗಿದ್ದು ಶುಭ ಕೋರಿದರು.
ಕೋಟ ಟ್ರಾವೆಲ್ ಲಿಂಕ್ ಅಧ್ಯಕ್ಷ ಸತೀಶ್ ಕುಂದರ್, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ ಪೂಜಾರಿ ಮತ್ತು ವರುಣತೀರ್ಥ ವೇದಿಕೆಯ ಅಧ್ಯಕ್ಷ ಉದಯ ದೇವಾಡಿಗರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಂಸ್ಕೃತಿ ಸಂಭ್ರಮ ಟ್ರಸ್ಟ್‌ನ ರಮೇಶ್ ಮೆಂಡನ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಟ್ರಸ್ಟಿನ ಇಬ್ರಾಹಿಮ್ ಬ್ಯಾರಿ ಉಪಸ್ಥಿತರಿದ್ದರು. ನೂರಕ್ಕೂ ಹೆಚ್ಚು ಮಳಿಗೆಗಳಲ್ಲಿ ವೈವಿಧ್ಯಮಯ ಮಾವು, ಹಲಸಿನ ಹಣ್ಣುಗಳು, ಅವುಗಳ ಉಪ ಉತ್ಪನ್ನಗಳು, ವಿವಿಧ ಖಾದ್ಯ ಪಾನೀಯಗಳು, ಕೃಷಿ ಪರಿಕರಗಳು ಗ್ರಾಹಕರನ್ನು ಸೆಳೆಯುತ್ತಿತ್ತು.
ಮಣೂರು ಪಡುಕೆರೆಯ ಗೀತಾನಂದ ಫೌಂಡೇಷನ್, ಕೋಟ ಸಹಕಾರಿ ವ್ಯವಸಾಯಿಕ ಸಂಘ, ಉಡುಪಿ ಜಿಲ್ಲಾ ಕೃಷಿ ಮತ್ತು ತೋಟಗಾರಿಕಾ ಇಲಾಖೆ, ಕೃಷಿ ಸಂಶೋಧನಾ ಕೇಂದ್ರ ಬ್ರಹ್ಮಾವರ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಉಡುಪಿ ಇವುಗಳು ಈ ಮೇಳದ ಸಹಭಾಗಿ ತ್ವವನ್ನು ಹೊಂದಿದ್ದವು.
ಅಚ್ಯುತ ಪೂಜಾರಿ ಮತ್ತು ರವಿ ಬನ್ನಾಡಿ ರೈತ ಗೀತೆ, ನಾಡಗೀತೆ ಹಾಗೂ ಸುಗಮ ಸಂಗೀತ ಹಾಡಿ ರಂಜಿಸಿದರು. ಸುಜಾತಾ ಬಾಯಿರಿ ಕಾರ್ಯಕ್ರಮ ನಿರೂಪಿಸಿ, ರಮೇಶ್ ಮೆಂಡನ್ ವಂದಿಸಿದರು.